ದತ್ತಪೀಠ ಮಾರ್ಗದಲ್ಲಿ ಗುಡ್ಡ ಕುಸಿತ

ಚಿಕ್ಕಮಗಳೂರು ತಾಲೂಕು ದತ್ತಪೀಠ ಮಾರ್ಗದ ಕವಿಕಲ್‌ಗಂಡಿ ಬಳಿಯ ಮೂರನೇ ತಿರುವಿನಲ್ಲಿ ಗುಡ್ಡ ಕುಸಿತ ಸಂಭವಿಸಿರುವುದು.
ಚಿಕ್ಕಮಗಳೂರು ತಾಲೂಕು ದತ್ತಪೀಠ ಮಾರ್ಗದ ಕವಿಕಲ್‌ಗಂಡಿ ಬಳಿಯ ಮೂರನೇ ತಿರುವಿನಲ್ಲಿ ಗುಡ್ಡ ಕುಸಿತ ಸಂಭವಿಸಿರುವುದು.
Published on
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಪ್ರಮುಖ ಧಾರ್ಮಿಕ ಕ್ಷೇತ್ರ ದತ್ತಪೀಠಕ್ಕೆ ತೆರಳುವ ಮಾರ್ಗಮಧ್ಯದಲ್ಲಿ ಶುಕ್ರವಾರ ಗುಡ್ಡಕುಸಿತ ಸಂಭವಿಸಿದ್ದು, ರಸ್ತೆ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಕೈಮರದಿಂದ ದತ್ತಪೀಠಕ್ಕೆ ತೆರಳುವ ಮಾರ್ಗ ಮಧ್ಯದ ಕವಿಕಲ್‌ಗಂಡಿ ಬಳಿಯ ಮೂರನೇ ತಿರುವಿನಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದ ಪರಿಣಾಮ ಮಣ್ಣು ಅರ್ಧ ರಸ್ತೆಯನ್ನು ಆಕ್ರಮಿಸಿದೆ.
ಚಂದ್ರದ್ರೋಣ ಪರ್ವತ ಶ್ರೇಣಿಕ ಎಂಟು ಕಡೆ ಗುಡ್ಡ ಕುಸಿತ ಸಂಭವವಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ತಡೆಗೋಡೆಗಳನ್ನು ನಿರ್ಮಿಸಲಾಗುತ್ತಿತ್ತು. ಕವಿಕಲ್‌ಗಂಡಿ ಬಳಿಯ ಮೂರನೇ ತಿರುವಿನ ಬಳಿ ತಡೆಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲೇ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿತ ಸಂಭವಿಸಿದೆ.
ಕಳೆದ ಎರಡು ದಿನಗಳಿಂದ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಮಳೆ ಚುರುಕುಗೊಂಡಿದೆ. ಹೀಗಾಗಿ ಮಣ್ಣು ಹೆಚ್ಚು ತೇವಾಂಶಗೊಂಡು ಕುಸಿದಿದೆ. ಪ್ರಸ್ತುತ ರಸ್ತೆಯ ಅರ್ಧಭಾಗ ಮಣ್ಣು ಆವರಿಸಿದೆ. ಹೀಗಾಗಿ ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗಿಲ್ಲ. ಆದರೆ ಮತ್ತೆ ಇದೇ ಪ್ರದೇಶದಲ್ಲಿ ಮತ್ತೆ ಗುಡ್ಡ ಕುಸಿತ ಸಂಭವಿಸಿದ್ದೇ ಆದಲ್ಲಿ ದತ್ತಪೀಠ ಭಾಗಕ್ಕೆ ರಸ್ತೆ ಸಂಚಾರವೇ ಬಂದ್ ಆಗುವ ಸಾಧ್ಯತೆ ಇದೆ. ಆಗ ಆ ಭಾಗದ ಹತ್ತಾರು ಹಳ್ಳಿಗಳ ಜನ ಹೊರಜಗತ್ತಿನ ಸಂಪರ್ಕವನ್ನೇ ಕಳೆದುಕೊಳ್ಳಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net