ಆಲ್ದೂರು: ಪಟ್ಟಣದಲ್ಲಿ ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ-27 ಅಗಲೀಕರಣ ಸಂಬಂಧ ಆಯೋಜಿಸಿದ್ದ ಅಂಗಡಿ ವರ್ತಕರು, ಕಟ್ಟಡ ಮಾಲೀಕರ ಜತೆ ಸಭೆಯಲ್ಲಿ ಭಾರಿ ವಿರೋಧ ವ್ಯಕ್ತವಾಯಿತು. ಸಭೆಯಲ್ಲಿ ಭಾಗವಹಿಸಿದ್ದ ಕಟ್ಟಡ ಹೊಂದಿರದವರು, ರಸ್ತೆ ವಿಸ್ತರಣೆಗೆ ಒಪ್ಪಿಗೆ ಇದೆ ಎಂದು ಹೇಳಿದ್ದರಿಂದ ವಾಗ್ವಾದ ನಡೆದು ಸಭೆ ಮೊಟಕುಗೊಳಿಸಲಾಯಿತು.
ಗುರುವಾರ ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಪಿಡಬ್ಲುೃಡಿ ಅಧಿಕಾರಿಗಳ ಜತೆ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ವರ್ತಕರ ಜತೆ ಸಭೆ ಆಯೋಜಿಸಲಾಗಿತ್ತು.
ಪಿಡಬ್ಲುೃಡಿ ಸಹಾಯಕ ಇಂಜಿನಿಯರ್ ಮಹಮ್ಮದ್ ದಾವುದ್ ಬೇಗ್ ಮಾತನಾಡಿ, ಮೂಡಿಗೆರೆ ರಸ್ತೆಯ ಪೂರ್ಣಪ್ರಜ್ಞಾ ಶಾಲೆಯಿಂದ ಪಟ್ಟಣದ ಬಸ್ ನಿಲ್ದಾಣ ಹಾಗೂ ಕೆಂಪೇಗೌಡ ವೃತ್ತದಿಂದ ಚಿಕ್ಕಮಗಳೂರು ಕಡೆಗೆೆ 100 ಮೀಟರ್ ರಸ್ತೆ ಅಗಲೀಕರಣ ಹಾಗೂ ಬಿ.ಎಚ್.ರಸ್ತೆ ಮೂಲಕ ಅರಣ್ಯ ಇಲಾಖೆ ಕಚೇರಿವರೆಗೆ ರಸ್ತೆ ಅಗಲೀಕರಣಕ್ಕೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಿಂದ 25 ಕೋಟಿ ಅನುದಾನ ಬಿಡುಗಡೆಯಾಗಿದೆ. ರಸ್ತೆ ಮಧ್ಯ ಭಾಗದಿಂದ ವಾಹನ ನಿಲುಗಡೆ, ವಾಹನ ಸುಗಮ ಸಂಚಾರಕ್ಕೆ 45 ಅಡಿ ವಿಸ್ತರಭಣೆಗೆ ಅನುದಾನ ಮಂಜೂರಾತಿ ಸಿಕ್ಕಿದೆ. ವರ್ತಕರು, ಕಟ್ಟಡ ಮಾಲೀಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ರಸ್ತೆ ವಿಸ್ತರಣೆಗೆ ವಿರೋಧಿಸಿದ ವರ್ತಕರು, ಈ ರೀತಿ ರಸ್ತೆ ಅಗಲೀಕರಣ ಮಾಡಿದರೆ ಬಹುತೇಕ ಕಟ್ಟಡಗಳು ನೆಲಸಮಗೊಳ್ಳುತ್ತವೆ. ಇದಕ್ಕೆ ನಮ್ಮ ಸಹಮತವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಸಮಯ ಗಲಾಟೆ, ಗೊಂದಲದಿಂದ ಸಭೆ ನಿಯಂತ್ರಣ ಕಳೆದುಕೊಂಡಿತು. ವರ್ತಕರ ಅಸಮಾಧಾನಕ್ಕೆ ಅಧಿಕಾರಿಗಳು ತಬ್ಬಿಬ್ಬಾದರು.
ಪಟ್ಟಣದಲ್ಲಿ ಕಟ್ಟಡ ಹೊಂದಿಲ್ಲದವರೂ ಸಭೆಯಲ್ಲಿ ಭಾಗವಹಿಸಿದ್ದು, ಅವರು ವಿಸ್ತರಣೆ ಮಾಡಲು ನಮ್ಮ ಅನುಮತಿ ಇದೆ ಎಂದು ಸಭೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಅವರ ಮಧ್ಯೆಯೇ ಮಾತಿನ ಚಕಮಕಿ ಆರಂಭವಾಯಿತು. ಸಭೆ ನಡೆಯುತ್ತಿದ್ದ ಸಭಾಂಗಣದಲ್ಲಿ ಮಾತುಗಳು ಸ್ಪಷ್ಟವಾಗಿ ಕೇಳದೆ ಪ್ರತಿಧ್ವನಿಸಿ ಯಾರು ಏನು ಹೇಳುತ್ತಿದ್ದಾರೆ ಎಂಬುದು ತಿಳಿಯುತ್ತಿರಲಿಲ್ಲ. ಹೀಗಾಗಿ ಇಲ್ಲಿ ನೀವು ಸಭೆ ಮಾಡುವುದು ಬೇಡ. ಕಟ್ಟಡದ ಹೊರ ಭಾಗದಲ್ಲಿ ಸಭೆ ನಡೆಸಿ ಎಂದು ವರ್ತಕರು ಪಟ್ಟು ಹಿಡಿದರು. ಅಧಿಕಾರಿಗಳು ಇದಕ್ಕೆ ಸಹಮತ ವ್ಯಕ್ತಪಡಿಸಿ ಕಟ್ಟಡದ ಕೆಳ ಭಾಗದಲ್ಲಿ ಸಭೆ ಆರಂಭಿಸಿದರೂ ಒಮ್ಮತದ ನಿರ್ಣಯಕ್ಕೆ ಬರಲು ಆಗಲಿಲ್ಲ.
ಗ್ರಾಪಂ ಮಾಜಿ ಅಧ್ಯಕ್ಷ ಭರತ್ ಮಾತನಾಡಿ, ಬಾಳೆಹೊನ್ನೂರಿನಲ್ಲಿ 33 ಅಡಿ ರಸ್ತೆ ವಿಸ್ತರಣೆ ಮಾಡಿದ್ದಾರೆ. ಜಯಪುರದಲ್ಲಿ 35 ಅಡಿ ರಸ್ತೆ ವಿಸ್ತರಣೆ ಮಾಡಲಾಗಿದೆ. ಇದೇ ಮಾನದಂಡ ಅನುಸರಿಸಿ ಆಲ್ದೂರಿನಲ್ಲಿ ವಿಸ್ತರಣೆ ಮಾಡಿ. ಪಟ್ಟಣದಲ್ಲಿ ಕಟ್ಟಡ ಹೊಂದಿರುವವರು ಹಾಗೂ ವರ್ತಕರನ್ನು ಮಾತ್ರ ಸಭೆಗೆ ಕರೆದು ಚರ್ಚೆ ಮಾಡಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಯಾವುದೇ ಒಮ್ಮತದ ತೀರ್ಮಾನಗಳು ಬಾರದ ಕಾರಣ ಅಧಿಕಾರಿಗಳು ಸಭೆಯನ್ನು ಮೊಟಕುಗೊಳಿಸಿ ತೆರಳಿದರು.
ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ಶಂಶುನ್ ನಹರ್, ಲೆಕ್ಕಾಧಿಕಾರಿ ಪ್ರವೀಣ್, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಅಧ್ಯಕ್ಷರು, ಕಟ್ಟಡ ಮಾಲೀಕರು, ವರ್ತಕರು, ಕಾಫಿ ಬೆಳೆಗಾರರು, ಗ್ರಾಪಂ ಮಾಜಿ ಸದಸ್ಯರು ಭಾಗವಹಿಸಿದ್ದರು.