ಹೋಯ್ಸಳರ ಕಾಲದ ವೀರಗಲ್ಲು ಪತ್ತೆ

ಚಿಕ್ಕಮಗಳೂರು ತಾಲೂಕಿನ ಆವತಿ ಸಮೀಪದ ಕರಗೂರು ಗ್ರಾಮದಲ್ಲಿ ಪತ್ತೆಯಾಗಿರುವ ಹೊಯ್ಸಳರ ಕಾಲಕ್ಕೆ ಸೇರಿದ ವೀರಗಲ್ಲು.
ಚಿಕ್ಕಮಗಳೂರು ತಾಲೂಕಿನ ಆವತಿ ಸಮೀಪದ ಕರಗೂರು ಗ್ರಾಮದಲ್ಲಿ ಪತ್ತೆಯಾಗಿರುವ ಹೊಯ್ಸಳರ ಕಾಲಕ್ಕೆ ಸೇರಿದ ವೀರಗಲ್ಲು.
Published on
ಚಿಕ್ಕಮಗಳೂರು: ತಾಲೂಕಿನ ಆವತಿ ಸಮೀಪದ ಕರಗೂರು ಗ್ರಾಮದಲ್ಲಿ ಹೊಯ್ಸಳರ ಕಾಲಕ್ಕೆ ಸೇರಿದ ವೀರಗಲ್ಲು ಪತ್ತೆಯಾಗಿದೆ. ಗ್ರಾಮದ ಸೋಮೇಶ್ ಗೌಡ ಇವರ ನೆರವಿನೊಂದಿಗೆ ಶಾಸನ ಸಂಶೋಧಕ ಮೇಕನಗದ್ದೆ ಲಕ್ಷ್ಮಣ ಗೌಡರು ಶಾಸನವನ್ನು ಅಚ್ಚು ತೆಗೆದು ಅಧ್ಯಯನಕ್ಕೆ ಒಳಪಡಿಸಿದ್ದಾರೆ.
ಮೈಸೂರಿನಲ್ಲಿ ನೆಲೆಸಿರುವ ನಿವೃತ್ತ ಶಾಸನ ತಜ್ಞ ಎಚ್.ಎಂ.ನಾಗರಾಜ ರಾವ್ ಶಾಸನದ ಪಠ್ಯ ತಯಾರಿಸಿ ಕೊಟ್ಟಿದ್ದಾರೆ.
ಅಂದಿನ ಕಾಲದಲ್ಲಿ ಸಹಜವಾಗಿ ವಿವಿಧ ಕಾರಣಗಳಿಗಾಗಿ ಊರೊಳಗೆ ಕಳ್ಳರು ನುಗ್ಗುತ್ತಿದ್ದಾಗ ಪ್ರಾಣದ ಹಂಗು ತೊರೆದು ಕಳ್ಳರೊಂದಿಗೆ ಹೋರಾಡಿ ವೀರಮರಣವನ್ನು ಹೊಂದಿದ ವೀರನ ನೆನಪಿನ ಸ್ಮಾರಕವಾಗಿ ಈ ವೀರಗಲ್ಲನ್ನು ನಿಲ್ಲಿಸಲಾಗಿದೆ.
ಗ್ರಾಮದ ಸರ್ವೆ ನಂಬರ್ 68ರಲ್ಲಿರುವ 35ಗುಂಟೆ ಸರ್ಕಾರಿ ಖರಾಬು ಜಮೀನಿನಲ್ಲಿರುವ ಈ ಶಾಸನವು ಸಂಪೂರ್ಣ ನಿರ್ಲಕ್ಷ್ಯತೆಗೆ ಒಳಗಾಗಿರುವುದು ಕಂಡು ಬಂದಿದೆ. ಈ ಶಾಸನ ಇರುವ ಜಮೀನಿನಲ್ಲಿ ಮಂಜನ ದೇವರು ಎಂಬ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಮುಜರಾಯಿ ದೇವಸ್ಥಾನದ ಅವಶೇಷಗಳಿವೆ. ಇದಲ್ಲದೆ ಗ್ರಾಮದಲ್ಲಿ ಹಲವಾರು ಐತಿಹಾಸಿಕ ಸ್ಮಾರಕಗಳಿವೆ. ಇಲ್ಲಿನ ದೇವಸ್ಥಾನದ ಅಭಿವೃದ್ದಿಗೆ ಸಾಕಷ್ಟು ಪ್ರಯತ್ನ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಸೋಮೆಶ್ ಗೌಡ ತಿಳಿಸಿದ್ದಾರೆ.
ಶಾಸನವು ನಾಲ್ಕು ಅಡಿ ಎತ್ತರವಿದ್ದು ಮೂರು ಪಟ್ಟಿಕೆಗಳಲ್ಲಿರುವ ಈ ವೀರಗಲ್ಲಿನ ಮೊದಲ ಹಂತದಲ್ಲಿ ವೀರಾವೇಶದಿಂದ ಹೋರಾಡುತ್ತಿರುವ ವೀರ, ಎರಡನೆ ಹಂತದಲ್ಲಿ ವೀರನಿಗೆ ಅಪ್ಸರೆಯರೊಂದಿಗೆ ವೀರಸ್ವರ್ಗ ಪ್ರಾಪ್ತವಾಗುವಿಕೆ ಹಾಗೂ ಮೇಲಿನ ಹಂತದಲ್ಲಿ ವೀರನಿಗೆ ದೈವತ್ವ ಪ್ರಾಪ್ತಿಯಾಗಿರುವ ಶಿಲ್ಪದ ಕೆತ್ತನೆಗಳಿವೆ. ನಡುವಿನ ಎರಡು ಪಟ್ಟಿಕೆಗಳಲ್ಲಿ ಹಾಗೂ ಬಲಭಾಗದ ಅಂಚಿನಲ್ಲಿ ಬರವಣಿಗೆ ಇದ್ದು ಅಲ್ಲಲ್ಲಿ ಕೆಲವು ಅಕ್ಷರಗಳು ಸವೆದು ಹೋಗಿವೆ.
ಶಾಸನದ ಮೊದಲನೆಯ ಪಟ್ಟಿಯಲ್ಲಿ ಸ್ವಸ್ತಿ ಶ್ರೀ ಮನು ಮಹಾಮಂಡಳೇಶ್ವರ ತ್ರಿಬುವನ ಮಲ್ಲ ಚಾಳುಕ್ಯ ಚಕ್ರವರ್ತಿ ಭುಜಬಲ ವೀರಗಂಗ ಪ್ರತಾಪ ಹೊಯ್ಸಳ ವಿಜಯನಾರಸಿಂಹ ದೇವರು ರಾಜ್ಯಂಗೈಯುತ್ತಲಿರೆ ಎಂಬ ವಿವರಗಳಿವೆ. ಎರಡನೆಯ ಪಟ್ಟಿಯಲ್ಲಿ ಇರುವ ಕೆಲವು ಅಕ್ಷರಗಳು ಸವೆದು ಹೋಗಿರುವುದರಿಂದ ಸ್ಪಷ್ಟವಾಗಿ ಏನನ್ನೂ ಹೇಳಲಾಗುವುದಿಲ್ಲ. ಬಲಭಾಗದ ಅಂಚಿನಲ್ಲಿ ಕಳ್ಳರ ಕೂಡೆ ಕಾದಿ ಬಿದ್ದು ಸುರಲೋಕ ಪ್ರಾಪ್ತಿ ಆದ ಎಂದಿದೆ.
ಮೃತ ವೀರನ ಹೆಸರು ಹಾಗೂ ಆಳ್ವಿಕೆ ಮಾಡುತ್ತಿದ್ದ ರಾಜಧಾನಿಯ ಹೆಸರುಗಳು ಸ್ಪಷ್ಟವಾಗಿಲ್ಲ. ಶಾಸನದಲ್ಲಿ ಹೊಯ್ಸಳರ ಬಿರುದುಗಳ ಜೊತೆಯಲ್ಲಿ ಚಾಲುಕ್ಯ ಚಕ್ರವರ್ತಿ ಎಂಬುದು ವಿಶೇಷವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net