ನಿಯಮ ಉಲ್ಲಂಸುವವರಿಗೆ ಭಾರಿ ದಂಡ

ಅರಣ್ಯ ಇಲಾಖೆಯ ಆದೇಶ ಪ್ರತಿ.
ಅರಣ್ಯ ಇಲಾಖೆಯ ಆದೇಶ ಪ್ರತಿ.
Published on

ಪ್ರಮುಖ ಮುಖ್ಯಾಂಶಗಳು

  • ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ
  • ದಂಡ ವಿಧಿಸುವ ಕ್ರಮ
ಕಳಸ: ಕುದುರೆಮುಖ ರಾಷ್ಟ್ರೀಯ ಉದ್ಯಾನ, ಸೋಮೇಶ್ವರ ಮತ್ತು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯಗಳ ವ್ಯಾಪ್ತಿಯ ರಸ್ತೆಗಳಲ್ಲಿ ಸಂಚರಿಸುವ ಪ್ರವಾಸಿಗರು ನಡೆಸುವ ನಿಷೇಧಿತ ಚಟುವಟಿಕೆಗಳಿಗೆ ಸಂಪೂರ್ಣ ಬ್ರೇಕ್ ಹಾಕಲು ಅರಣ್ಯ ಇಲಾಖೆ ಮುಂದಾಗಿದೆ.
ನಿಯಮ ಉಲ್ಲಂಸುವವರಿಗೆ ವಿಧಿಸಲಾಗುತ್ತಿದ್ದ ದಂಡದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಪರಿಷ್ಕರಿಸಿ ಕಾರ್ಕಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಅಧಿಕೃತ ಆದೇಶ ಹೊರಡಿಸಿದೆ.
ಅಭಯಾರಣ್ಯಗಳ ಮೂಲಕ ಹಾದು ಹೋಗುವ ರಸ್ತೆಗಳಲ್ಲಿ ಸಂಚರಿಸುವ ಪ್ರವಾಸಿಗರು ವನ್ಯಪ್ರಾಣಿಗಳಿಗೆ ತಿಂಡಿ-ತಿನಿಸು ನೀಡುವುದು, ವಾಹನಗಳನ್ನು ನಿಲ್ಲಿಸುವುದು, ಪ್ಲಾಸ್ಟಿಕ್ ಕಸ ಎಸೆಯುವುದು, ರಸ್ತೆ ಬದಿಯ ಅರಣ್ಯಕ್ಕೆ ನುಗ್ಗಿ ಸ್ನಾನ ಮಾಡುವುದು, ವಾಹನ ತೊಳೆಯುವುದು ಹಾಗೂ ಅಡುಗೆ ತಯಾರಿಸುವಂಥ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುತ್ತಿರುವುದು ಹೆಚ್ಚಾಗಿದೆ. ಇದು ಪರಿಸರ ಮಾಲಿನ್ಯಕ್ಕೆ ಕಾರಣವಾಗುವುದಲ್ಲದೆ, ವನ್ಯಜೀವಿಗಳ ನೈಸರ್ಗಿಕ ಜೀವನಶೈಲಿ ಮತ್ತು ಪ್ರವಾಸಿಗರ ಪ್ರಾಣಕ್ಕೆ ಅಪಾಯ ತಂದೊಡ್ಡುತ್ತಿದೆ. ಹಿಂದೆ ಇದ್ದ ದಂಡದ ಮೊತ್ತವು ಸಾರ್ವಜನಿಕರಲ್ಲಿ ಶಿಸ್ತು ಮೂಡಿಸಲು ಪರಿಣಾಮಕಾರಿಯಾಗಿಲ್ಲದ ಕಾರಣ ದಂಡದ ದರವನ್ನು ಪರಿಷ್ಕರಿಸಲಾಗಿದೆ.
ಈ ಬಗ್ಗೆ ವಿಜಯವಾಣಿ ಪತ್ರಿಕೆ ಜು.17ರ ಸಂಚಿಕೆಯಲ್ಲಿ ಸೂಕ್ಷ್ಮ ಪರಿಸರದೊಳಗೆ ವಾರಾಂತ್ಯ ರಜಾ ದಿನಗಳಲ್ಲಿ ಪ್ರವಾಸಿಗರ ಹುಚ್ಚಾಟ ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾದ ಬೆನ್ನಲ್ಲೇ ಇಲಾಖೆಯು ದಂಡ ವಿಧಿಸುವ ಕ್ರಮ ತೆಗೆದುಕೊಂಡಿದೆ. ಚೆಕ್‌ಪೋಸ್ಟ್‌ಗಳಲ್ಲಿ ಪ್ರವಾಸಿಗರಿಗೆ ತಿಳಿವಳಿಗೆ ನೀಡುವುದಲ್ಲದೆ ಇಲಾಖೆ ಕುದುರೆಮುಖ ಮುಖ್ಯ ರಸ್ತೆಯಲ್ಲಿ ಗಸ್ತು ಹೆಚ್ಚಿಸಿದೆ.
ಪರಿಷ್ಕೃತ ದಂಡ ಆ.1ರಿಂದ ಅನ್ವಯವಾಗಲಿದೆ. ಪ್ರಸ್ತುತ ರಸ್ತೆಬದಿ ತ್ಯಾಜ್ಯ ಇತ್ಯಾದಿ ಎಸೆದರೆ  100 ರೂ., ರಸ್ತೆ ಬದಿ ಅನುಮತಿ ಇಲ್ಲದೆ ಅರಣ್ಯಕ್ಕೆ ಪ್ರವೇಶಿಸಿದರೆ 200, ರಸ್ತೆಬದಿಯ ಜಲಪಾತಗಳಲ್ಲಿ ಸ್ನಾನ ಮಾಡಿದರೆ 200, ರಸ್ತೆಬದಿ ವಾಹನ ತೊಳೆಯುವುದು, ಅಡುಗೆ ತಯಾರಿಸಿದರೆ 200, ವನ್ಯಪ್ರಾಣಿಗಳಿಗೆ ತಿಂಡಿ ತಿನಿಸು ನೀಡಿದರೆ 50, ರಾಷ್ಟ್ರೀಯ ಉದ್ಯಾನದೊಳಗೆ ಸಕಾರಣವಿಲ್ಲದೆ ನಿಗದಿತ ಅವಧಿಗಿಂತ ಹೆಚ್ಚಾಗಿ ಉಳಿದರೆ 200 ರೂ. ದಂಡ ನಿಗದಿಪಡಿಸಲಾಗಿತ್ತು. ಇನ್ನು ಆ.1ರಿಂದ ಎಲ್ಲ ಪ್ರಕರಣಗಳಿಗೆ 500 ರೂ. ನಿಗದಿ ಮಾಡಲಾಗಿದೆ. ಪರಿಷ್ಕೃತ ದಂಡ ವಿಧಿಸುವ ಅಧಿಕಾರವನ್ನು ಗಸ್ತು ಅರಣ್ಯ ಪಾಲಕರು ಮತ್ತು ಮೇಲ್ಮಟ್ಟದ ಅಧಿಕಾರಿಗಳಿಗೆ ನೀಡಲಾಗಿದೆ. ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರು ಸಹಕರಿಸಬೇಕು ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ ಬಾಬು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net