

ಜಿಲ್ಲೆಯ ಮಲೆನಾಡು ಭಾಗದಲ್ಲಿ ಶನಿವಾರವೂ ಗಾಳಿ-ಮಳೆಯ ಅಬ್ಬರ ಮುಂದುವರಿದಿದ್ದು, ಶೃಂಗೇರಿ, ಕಳಸ, ಕೊಪ್ಪ ಹಾಗೂ ಎನ್.ಆರ್.ಪುರ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಯ ಪರಿಣಾಮ ತುಂಗಾ ಹಾಗೂ ಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ತೀರದ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಕೊಪ್ಪ ಮತ್ತು ಶೃಂಗೇರಿ ತಾಲೂಕಿನ ಎಲ್ಲಾ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳಿಗೆ, ಹಾಗೆಯೇ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಹೋಬಳಿಯ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳಿಗೆ ತಾಲೂಕು ಆಡಳಿತ ರಜೆ ಘೋಷಿಸಿದೆ.
ಶೃಂಗೇರಿ ತಾಲೂಕಿನ ಕೆರೆಕಟ್ಟೆ ಪ್ರದೇಶದಲ್ಲಿ ಬೆಳಗ್ಗೆಯಿಂದಲೇ ಧಾರಾಕಾರ ಮಳೆಯಾಗುತ್ತಿದ್ದು, ತುಂಗಾ ನದಿಯ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ. ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಪ್ರವಾಹ ಭೀತಿ ಎದುರಾಗಿದೆ. ತುಂಗಾ ನದಿಯ ಪ್ರವಾಹದಿಂದ ನದಿ ತೀರದಲ್ಲಿರುವ ಕಪ್ಪೆ ಶಂಕರನಾರಾಯಣ ದೇವಾಲಯ ಮುಳುಗಡೆಯಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ರಸ್ತೆಗಳು ಜಲಾವೃತ, ಸಂಚಾರ ಸ್ಥಗಿತ:
ತುಂಗಾ ನದಿಯ ನೀರಿನ ಮಟ್ಟ ಏರಿಕೆಯಿಂದ ಶೃಂಗೇರಿ ದೇವಾಲಯದ ಪಾರ್ಕಿಂಗ್ ಲಾಟ್‌ಗೆ ಸಂಪರ್ಕಿಸುವ ಪ್ಯಾರಲಲ್ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ರಸ್ತೆ ಮೇಲೆ ಮೂರರಿಂದ ನಾಲ್ಕು ಅಡಿ ಎತ್ತರದ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಗುಡ್ಡ ಕುಸಿತದಿಂದ ಬಾವಿಗೆ ಹಾನಿ:
ಶೃಂಗೇರಿ ಪಟ್ಟಣದ ಕುರುಬರಕೇರಿ ಪ್ರದೇಶದಲ್ಲಿ ಭಾರೀ ಮಳೆಯ ಪರಿಣಾಮ ಯೋಗಾನಂದ ಪ್ರದೀಪ್ ಭಟ್ ಅವರ ಮನೆಯ ಹಿಂಭಾಗದ ಗುಡ್ಡ ಕುಸಿದಿದೆ. ಇದರ ಪರಿಣಾಮ ಮನೆಯ ಬಾವಿ ಸುಮಾರು ಎರಡು ಅಡಿ ಕುಸಿದಿದ್ದು, ಬಾವಿಯ ಕುಡಿಯುವ ನೀರು ಸಂಪೂರ್ಣ ಕೆಸರಿನಿಂದ ತುಂಬಿದೆ. ಮಳೆ ಮುಂದುವರಿದರೆ ಮತ್ತಷ್ಟು ಅಪಾಯ ಸಂಭವಿಸುವ ಆತಂಕ ವ್ಯಕ್ತವಾಗಿದ್ದು, ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಕಳಸ-ಕುದುರೆಮುಖ ಭಾಗದಲ್ಲಿ ಉಕ್ಕಿದ ಭದ್ರಾ ನದಿ:
ಕಳಸ-ಕುದುರೆಮುಖ ಭಾಗದಲ್ಲೂ ಮಳೆಯ ಅಬ್ಬರ ಮುಂದುವರಿದಿದ್ದು, ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕಳಸ ತಾಲೂಕಿನ ಜಾಂಬಳೆ ಗ್ರಾಮದ ಸೇತುವೆ ಮೇಲೆ ಪ್ರವಾಹದ ನೀರು ಹರಿಯುತ್ತಿರುವುದರಿಂದ ಕಳಸ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ಮಳೆ ಇದೇ ರೀತಿ ಮುಂದುವರಿದರೆ ನದಿಯ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇರುವುದರಿಂದ ನದಿ ತೀರದ ನಿವಾಸಿಗಳು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.
ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಪ್ರವಾಹ ಭೀತಿ ಹೆಚ್ಚಿದ್ದು, ಪರಿಸ್ಥಿತಿಯ ಮೇಲೆ ಜಿಲ್ಲಾಡಳಿತ ನಿರಂತರ ನಿಗಾ ವಹಿಸಿದೆ.