ಬೀರೂರಿನ ಜಿಎಫ್‌ಜಿಸಿ ಕಾಲೇಜಿನಲ್ಲಿ ಇನ್ನರ್‌ವೀಲ್ ಕ್ಲಬ್ ಹಾಗೂ ಯೂತ್ ರೆಡ್‌ಕ್ರಾಸ್‌ನಿಂದ ಆಯೋಜಿಸಿದ್ದ ಮಾದಕ ವಸ್ತುಗಳ ಜಾಗೃತಿ ಕಾರ್ಯಕ್ರಮದಲ್ಲಿ ಪಿಎಸ್‌ಐ ಧನಂಜಯ್ ಮಾತನಾಡಿದರು.
Published on:
Copied
Follow Us
ಬೀರೂರು: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಇಂದಿನ ಯುವ ಪೀಳಿಗೆ ದೇಶದ ನಿಜವಾದ ಸಂಪತ್ತು. ದೇಶ ಪ್ರಗತಿ ಹೊಂದಬೇಕಾದರೆ ಯುವ ಪೀಳಿಗೆ ದುಶ್ಚಟಗಳಿಂದ ದೂರವಿರಬೇಕು ಎಂದು ಇನ್ನರ್‌ವೀಲ್ ಅಧ್ಯಕ್ಷೆ ಭಾಗ್ಯ ನಾರಾಯಣ್ ಹೇಳಿದರು.
ಪಟ್ಟಣದ ಜಿಎಫ್‌ಜಿಸಿ ಕಾಲೇಜಿನಲ್ಲಿ ನಡೆದ ಮಾದಕ ವಸ್ತುಗಳ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದ ಆರ್ಥಿಕ ಪ್ರಗತಿ ಮತ್ತು ಸುಸ್ಥಿರ ಭವಿಷ್ಯ ಈ ದೇಶದ ಯುವ ಪೀಳಿಗೆಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಆಧಾರಿತವಾಗಿರುತ್ತದೆ. ಆದ್ದರಿಂದ ಆರೋಗ್ಯವಂತ ಯುವಪೀಳಿಗೆ ನಿರ್ಮಿಸುವುದು ಸಮಾಜದ ಜವಾಬ್ದಾರಿ ಎಂದರು.
ವಿದ್ಯಾರ್ಥಿಗಳ ಜೀವನ ಅತ್ಯಮೂಲ್ಯವಾಗಿದ್ದು, ತಂಬಾಕು, ಮದ್ಯ, ಗಾಂಜಾ, ಅಫೀಮುಗಳಂತಹ ಮಾದಕ ವಸ್ತುಗಳಿಗೆ ದಾಸರಾಗಿ ದೇಶಕ್ಕೆ ಮಾರಕರಾಗುತ್ತಿದ್ದಾರೆ. ಇಂತಹ ಮಾದಕ ದ್ರವ್ಯಗಳಿಂದ ದೂರವಿದ್ದು, ಉತ್ತಮ ಸಮಾಜ ನಿರ್ಮಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಬೀರೂರು ಪಿಎಸ್‌ಐ ಧನಂಜಯ್ ಮಾತನಾಡಿ, ಸಮಾಜದಲ್ಲಿ ಒಳ್ಳೆಯ ವಿಷಯಗಳು ನಡೆದರೆ ಗಮನಕ್ಕೆ ಬರುವುದಿಲ್ಲ. ಆದರೆ ಕೆಟ್ಟ ವಿಷಯಗಳು ಅತ್ಯಂತ ಬೇಗ ಆಕರ್ಷಿಸುತ್ತವೆ. ಇಂತಹ ಆಕರ್ಷಣೆ ಕಡೆ ಗಮನ ಕೊಟ್ಟರೆ ನಿಮ್ಮ ಭವಿಷ್ಯ ನಾಶವಾಗುತ್ತದೆ ಎಂಬ ಅರಿವು ಯುವ ಪೀಳಿಗೆಯಲ್ಲಿರಬೇಕು. ಮತ್ತು ಮಾದಕವಸ್ತುಗಳ ಬಳಕೆ ಹಾಗೂ ಮಾರಾಟ ಕಾನೂನು ಬಾಹಿರವಾಗಿದೆ. ಇಂತಹ ಘಟನೆಗಳು ಕಂಡಲ್ಲಿ ಪೊಲೀಸರ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.
ಪತ್ರೆ ಕೆ.ಶಿವಪ್ಪಯ್ಯ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಅರುಣ್ ಮಾತನಾಡಿ, ಮಾದಕ ವಸ್ತುಗಳ ಬಳಕೆಯಿಂದ ದೇಹದ ಮತ್ತು ಮಾನಸಿಕ ಸ್ಥಿರತೆಗೆ ನಾಶವಾಗುತ್ತದೆ. ಯುವ ಶಕ್ತಿಯನ್ನು ಹಂತ ಹಂತವಾಗಿ ಕೊಲ್ಲುತ್ತದೆ. ಇದರಿಂದ ನಿಮ್ಮನ್ನು ನಂಬಿರುವ ಕುಟುಂಬದ ನೆಮ್ಮದಿಯೂ ನಾಶವಾಗುತ್ತದೆ. ನಿಮ್ಮ ಮುಂದಿನ ಭವಿಷ್ಯ ಉತ್ತಮವಾಗಿರಲು ಇಂದು ಮಾದಕ ವಸ್ತುಗಳ ದುಶ್ಚಟಗಳಿಂದ ಮುಕ್ತರಾಗಿ ಎಂದು ಕರೆ ನೀಡಿದರು.
ಜಿಎಫ್‌ಜಿಸಿ ಕಾಲೇಜಿ ಪ್ರಾಚಾರ್ಯ ಡಾ.ಹರೀಶ್, ಇನ್ನರ್‌ವೀಲ್ ನಿಕಟ ಪೂರ್ವ ಅಧ್ಯಕ್ಷೆ ಸವಿತಾ ರಮೇಶ್, ಶಿಕ್ಷಕಿ ಸುಮಾ, ಹಾಗೂ ಇನ್ನರ್‌ವೀಲ್ ಪದಾಧಿಕಾರಿಗಳು ಇದ್ದರು.