ಕಡೂರು: ಶ್ರಮಿಕ ಜೀವಿಗಳಿಗೆ ಬದುಕು ಸಾಗಿಸಲು ಗ್ಯಾರಂಟಿ ಯೋಜನೆಗಳು ಸಹಕಾರಿ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ನಿಡುವಳ್ಳಿ ತಾಂಡಾದಲ್ಲಿ 2 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಇತ್ತೀಚೆಗೆ ಪಂಚನಹಳ್ಳಿಯಲ್ಲಿ ನಡೆದ ಜನಸಂಪರ್ಕಸಭೆಯಲ್ಲಿ ನಿಡುವಳ್ಳಿ ತಾಂಡಾದಿಂದ ಪಂಚನಹಳ್ಳಿ ಸಂಪರ್ಕಿಸುವ ಕಾಲುಜಾಡನ್ನು ಸಿಸಿ ರಸ್ತೆಯಾಗಿ ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದ ಹಿನ್ನಲೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಪಂಚನಹಳ್ಳಿಯಿಂದ ಸಿಂಗಟಗೆರೆವರೆಗೆ 20 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಉಪ್ಪಿನಹಳ್ಳಿಯಿಂದ ಉಪ್ಪಿನಹಳ್ಳಿ ತಾಂಡಾದವರೆಗೆ 80 ಲಕ್ಷ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ತಿಮ್ಮಲಾಪುರ, ದೊಡ್ಡಿಹಟ್ಟಿ, ಬಿ.ಟಿ.ಮಲ್ಲೇನಹಳ್ಳಿ ಸೇರಿದಂತೆ ಪಂಚನಹಳ್ಳಿ ಹೋಬಳಿ ವ್ಯಾಪ್ತಿಯ ಪ್ರತಿ ಗ್ರಾಮಕ್ಕೂ ಸಮುದಾಯ ಭವನ ದೇವಸ್ಥಾನ, ರಸ್ತೆ ಹೀಗೆ ಯಾವುದಾದರೂ ಒಂದು ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಒದಗಿಸಲಾಗಿದೆ ಎಂದರು.
ಇಂದಿರಾ ಕ್ಯಾಂಟಿನ್ ಮೇಲುಸ್ತುವಾರಿ ರಾಜ್ಯ ಸಮಿತಿ ಅಧ್ಯಕ್ಷ ಪಂಚನಹಳ್ಳಿ ಪ್ರಸನ್ನ ಮಾತನಾಡಿ, ನಿಡುವಳ್ಳಿ ತಾಂಡಾದ ಜನತೆ ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಪಂಚನಹಳ್ಳಿಗೆ ಬಂದು ಹೋಗುತ್ತಾರೆ. ಆದರೆ ಸಮರ್ಪಕ ರಸ್ತೆ ಇಲ್ಲದ ಕಾರಣ ನಿಡುವಳ್ಳಿಗ್ರಾಮವನ್ನು ಸುತ್ತಿಕೊಂಡು ಪಂಚನಹಳ್ಳಿಗೆ ಬರಬೇಕಿತ್ತು. ಇದೀಗ ಶಾಸಕರು ಅನುದಾನ ತಂದು ರಸ್ತೆ ಅಭಿವೃದ್ಧಿ ಮಾಡುತ್ತಿರುವುದರಿಂದ ತಾಂಡಾದ ಜನತೆ ನೇರವಾಗಿ ಪಂಚನಹಳ್ಳಿಗೆ ಬಂದು ಹೋಗಲು ಸಹಕಾರಿಯಾಗಲಿದೆ. ತಾಂಡಾ ಜನರ ಬಹುದಿನಗಳ ಬೇಡಿಕೆ ಇಂದು ಈಡೇರಿದೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದರಾಮಪ್ಪ, ಪಿ.ಎನ್.ಓಂಕಾರಮೂರ್ತಿ, ತಮ್ಮಯ್ಯಪ್ಪ, ಲಕ್ಷೀತ್ಮಶ, ಜಯಣ್ಣ, ರಂಗನಾಥ್, ಕೋಡಿಹಳ್ಳಿ ಶ್ರೀನಿವಾಸ್‌ನಾಯ್ಕ, ಸೋಮಶೇಖರ್, ಪಿ.ಇ.ಸಂಜಯ್ ಮತ್ತಿತರಿದ್ದರು.