ಬಾಳೆಹೊನ್ನೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರ ಜೀವನಕ್ಕೆ ಭದ್ರತೆ ದೊರೆತಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಹೇಳಿದರು.
ಗ್ಯಾರಂಟಿ ಯೋಜನೆಗಳಿಗೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಮೀಪದ ಮೇಗರಮಕ್ಕಿ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯ ಸರ್ಕಾರವು ಮೂರು ವರ್ಷಗಳ ಹಿಂದೆ ಆರಂಭಿಸಿದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿದೆ. ಬಡವರು, ಕೂಲಿ ಕಾರ್ಮಿಕರು, ಸಾಮಾನ್ಯ ವರ್ಗದ ಜನತೆಗೆ ಆರ್ಥಿಕ ಸದೃಢತೆ ನೀಡಿದೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ಉಳಿತಾಯ ಮಾಡಿಕೊಂಡ ಹಣದಲ್ಲಿ ತಮ್ಮ ಕುಟುಂಬಕ್ಕೆ ಆರ್ಥಿಕ ಭದ್ರತೆ ಮಾಡಿಕೊಂಡಿದ್ದಾರೆ. ಮಹಿಳೆಯರಿಗೆ ಜಾರಿಗೊಳಿಸಿದ ಗೃಹಲಕ್ಷ್ಮಿ ಯೋಜನೆ ದೇಶದಲ್ಲಿಯೇ ನಂ.1ಯೋಜನೆಯಾಗಿದ್ದು, ಮಹಿಳೆಯರು ಆರ್ಥಿಕ ಸಬಲೀಕರಣ ಸಾಧಿಸುವಲ್ಲಿ ಪೂರಕವಾಗಿದೆ. ಗೃಹ ಜ್ಯೋತಿ, ಶಕ್ತಿ ಯೋಜನೆ, ಯುವನಿಧಿ ಎಲ್ಲವೂ ಅತ್ಯುತ್ತಮ ಗ್ಯಾರಂಟಿಯಾಗಿದೆ. ಮೂರು ವರ್ಷದ ಸಂಭ್ರಮಾಚರಣೆ ಅಂಗವಾಗಿ ಮುತ್ತಿನಕೊಪ್ಪ, ಸಿಂಸೆ, ಕಟ್ಟಿನಮನೆ ಹಾಗೂ ಮೇಗರಮಕ್ಕಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರುಬೈಲು ನಟರಾಜ್ ಮಾತನಾಡಿ, ರಾಜ್ಯ ಸರ್ಕಾರ ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ಈ ಯೋಜನೆಗಳು ಅರ್ಹರಿಗೆ ತಲುಪಬೇಕು ಎಂಬುದು ಪ್ರಮುಖ ಉದ್ದೇಶ. ಯಾವುದೇ ಅರ್ಹ ಲಾನುಭವಿಗಳು ಈ ಯೋಜನೆಯಿಂದ ವಂಚಿತರಾಗಬಾರದು. ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಕೋಟ್ಯಂತರ ರೂ ಅನುದಾನ ವಿನಿಯೋಗಿಸುತ್ತಿದ್ದು, ಇದು ಸಮರ್ಪಕವಾಗಿ ತಲುಪಲು ಅಧಿಕಾರಿಗಳು ಶ್ರಮಿಸಬೇಕು ಎಂದರು.
ಗ್ಯಾರಂಟಿ ಯೋಜನೆಯ ಸಂಭ್ರಮಾಚರಣೆ ಅಂಗವಾಗಿ ವಿವಿಧ ಗಿಡಗಳನ್ನು ನೆಡಲಾಯಿತು. ಸಿಡಿಪಿಒ ವೀರೇಶ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಟಿ.ಟಿ.ಇಸ್ಮಾಯಿಲ್, ಹೂವಮ್ಮ, ಸಂದೀಪ್, ಪಿಡಿಒ ಪಿ.ಕೆ.ಪ್ರಕಾಶ್, ಎಸ್‌ಡಿಎಂಸಿ ಅಧ್ಯಕ್ಷ ಸುಭಾಷ್, ಮುಖ್ಯಶಿಕ್ಷಕಿ ತುಂಗಾ ಮತ್ತಿತರರು ಹಾಜರಿದ್ದರು.