ಶೃಂಗೇರಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ನಿಂದ ಪಂಜಿನ ಮೆರವಣಿಗೆ ನಡೆಸಲಾಯಿತು. ಆನೆಗುಂದ ರಾಮಣ್ಣ, ಎಂ.ಎಚ್.ನಟರಾಜ್, ಅಗಸೊಳ್ಳಿ ನಾರಾಯಣ, ಕುರದಮನೆ ವೆಂಕಟೇಶ್, ಸಂತೋಷ್ ಕಾಳ್ಯ ಇತರರಿದ್ದರು.
ಶೃಂಗೇರಿ: ವಿದ್ಯಾರ್ಥಿಗಳು ದೇಶವನ್ನು ಮುನ್ನಡೆಸುವ ಪ್ರಜೆಗಳು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪಾರಿಣಾಮ ಬೀರಿದೆ ಎಂದು ಪ್ರಗತಿಪರ ಹೋರಾಟ ವೇದಿಕೆ ಹಾಗಲಗಂಚಿ ವೆಂಕಟೇಶ್ ಹೇಳಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ಕುವೆಂಪು ಬಸ್ ನಿಲ್ದಾಣದಿಂದ ಸಂತೆ ಮಾರುಕಟ್ಟೆವರೆಗೆ ಪ್ರಗತಿಪರ ಹೋರಾಟ ವೇದಿಕೆಯಿಂದ ನಡೆದ ಪಂಜಿನ ಮೆರವಣಿಗೆಯಲ್ಲಿ ಮಾತನಾಡಿದರು.
ನೀಟ್ ಹಗರಣದಲ್ಲಿ ದೇಶದಾದ್ಯಂತ 24 ಲಕ್ಷ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ತಿಂಗಳಿನಿಂದ ಪ್ರತಿಭಟನೆ ಮಾಡಿದರೂ ವಿದ್ಯಾರ್ಥಿಗಳಿಗೆ ಯಾವುದೇ ನ್ಯಾಯ ಒದಗಿಸುವ ಪ್ರಯತ್ನ ಮಾಡಿಲ್ಲ. ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರಗತಿಪರ ಹೋರಾಟ ವೇದಿಕೆ ಪದಾಧಿಕಾರಿ ಎಂ.ಎಚ್ ನಟರಾಜ್ ಮಾತನಾಡಿ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಜೈಲು ಶಿಕ್ಷೆಯಂಥ ಕಠಿಣ ಶಿಕ್ಷೆ ವಿಧಿಸಲು ಪ್ರತ್ಯೇಕ ಕಾನೂನು ಜಾರಿಗೆ ತರಬೇಕು. ಇಂಥ ಪ್ರಕರಣಗಳ ಹಿಂದೆ ದೊಡ್ಡ ಮಟ್ಟದ ಜಾಲವಿದ್ದು, ನಿಷ್ಪಕ್ಷಪಾತ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕುವೆಂಪು ಬಸ್ ನಿಲ್ದಾಣದಿಂದ ಸಂತೆ ಮಾರುಕಟ್ಟೆವರೆಗೆ ಕೇಂದ್ರ ಸರ್ಕಾರದ ವಿರುದ್ಧ ಪಂಜಿನ ಮೆರವಣಿಗೆ ನಡೆಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಶಿವಮೂರ್ತಿ, ತಿಮ್ಮಪ್ಪ, ಭಾಸ್ಕರ್ ನಾಯ್ಕ, ಅಭಿಷೇಕ್, ಅವಿನಾಶ್, ಸುಮುಖ, ಸಂದೀಪ್, ನೂತನ್ ಹೆಗ್ಡೆ, ದಿನೇಶ್ ಶೆಟ್ಟಿ ಇತರರಿದ್ದರು.