ಉತ್ತಮ ಕಲಿಕೆ, ಉತ್ತಮ ಭವಿಷ್ಯಕ್ಕೆ ದಾರಿದೀಪ

ಚಿಕ್ಕಮಗಳೂರು ತಾಲೂಕಿನ ಮಣೇನಹಳ್ಳಿ ಹಾಗೂ ಜಡಗನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಚಿಕ್ಕಮಗಳೂರು ತಾಲೂಕು ಕುರುಬ ಸಂಘದ ವತಿಯಿಂದ ಉಚಿತ ನೋಟ್‌ಪುಸ್ತಕ, ಲೇಖನ ಸಾಮಾಗ್ರಿ ವಿತರಣೆ ಮಾಡಲಾಯಿತು.
ಚಿಕ್ಕಮಗಳೂರು ತಾಲೂಕಿನ ಮಣೇನಹಳ್ಳಿ ಹಾಗೂ ಜಡಗನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಚಿಕ್ಕಮಗಳೂರು ತಾಲೂಕು ಕುರುಬ ಸಂಘದ ವತಿಯಿಂದ ಉಚಿತ ನೋಟ್‌ಪುಸ್ತಕ, ಲೇಖನ ಸಾಮಾಗ್ರಿ ವಿತರಣೆ ಮಾಡಲಾಯಿತು.
Published on
ಚಿಕ್ಕಮಗಳೂರು: ಉತ್ತಮ ಕಲಿಕೆ, ಉತ್ತಮ ಭವಿಷ್ಯಕ್ಕೆ ದಾರಿದೀಪ. ವಿದ್ಯಾರ್ಜನೆ ಸಮಯದಲ್ಲಿ ಮಕ್ಕಳು ಕಲಿಕೆಯಲ್ಲಿ ಹೆಚ್ಚು ಮುತುವರ್ಜಿ ವಹಿಸಬೇಕು. ಶಿಕ್ಷಕರು ಮಕ್ಕಳನ್ನು ಪ್ರೋತ್ಸಾಹಿಸುವ ಮೂಲ ಕ ನಾಡಿನ ಸತ್ಪ್ರಜೆಗಳಾಗಿಸಬೇಕು ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಇ.ರಾಜು ಹೇಳಿದರು.
ತಾಲೂಕಿನ ಮಣೇನಹಳ್ಳಿ ಹಾಗೂ ಜಡಗನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಚಿಕ್ಕಮಗಳೂರು ತಾಲೂಕು ಕುರುಬ ಸಂಘದ ವತಿಯಿಂದ ಉಚಿತ ನೋಟ್‌ಪುಸ್ತಕ, ಲೇಖನ ಸಾಮಾಗ್ರಿ ವಿತರಣೆ ಮಾಡಿ ಮಾತನಾಡಿದರು.
ಶಾಲೆಗಳಲ್ಲಿ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸದೇ ಜಾತ್ಯಾತೀತ ನಿಲುವಿನೊಂದಿಗೆ ಶಾಲೆಯ ಎಲ್ಲಾ ಮಕ್ಕಳಿಗೆ ನೋಟ್‌ಪುಸ್ತಕ ವಿತರಿಸಲಾಗಿದೆ. ವಿಶೇಷವಾಗಿ ಕಡುಬಡತನ, ಮಾಧ್ಯಮ ವರ್ಗ ದ ಕುಟುಂಬದ ಮಕ್ಕಳಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರತಿಭೆ ಎನ್ನುವುದು ಮಕ್ಕಳಲ್ಲಿ ಅಡಗಿರುತ್ತದೆ. ಈ ಪ್ರತಿಭೆ ಅನಾವರಣಕ್ಕೆ ಪಾಲಕರು ಮತ್ತು ಶಿಕ್ಷಕರು ಒತ್ತು ನೀಡಬೇಕು. ಅಲ್ಲದೇ ಗ್ರಾಮೀಣ ಭಾಗದ ಶಾಲೆಗಳಲ್ಲಿ ಅಭ್ಯಾಸಿಸಿದ ಅನೇಕ ವಿದ್ಯಾರ್ಥಿಗಳು ಸಮಾಜದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದು ಇದು ಗ್ರಾಮೀಣ ಶಾಲೆಯ ಶಕ್ತಿ ಎಂದು ಹೇಳಿದರು.
ತಾಲೂಕಿನ ಕುರುಬ ಸಂಘವು ಜನಾಂಗ ಸೇರಿದಂತೆ ಸಮಾಜದ ಎಲ್ಲಾ ವರ್ಗದವರಿಗೆ ಅನುಕೂಲ ಕಲ್ಪಿಸಲು ಸಾಮಾಜಿಕ ಕಾರ್ಯ ಹಮ್ಮಿಕೊಂಡಿದೆ. ಹೀಗಾಗಿ ತಾಲ್ಲೂಕಿನಾದ್ಯಂತ ಸರ್ಕಾರಿ ಶಾಲೆಗಳನ್ನು ಪಟ್ಟಿ ಮಾಡಿಕೊಂಡು ಸಂಘದಿಂದ ಉಚಿತ ನೋಟ್‌ಪುಸ್ತಕ ವಿತರಿಸುವ ಕಾರ್ಯ ಹಮ್ಮಿಕೊಂಡಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಮೂರ್ತಿ ಅಡವೇಗೌಡ ಮಾತನಾಡಿ, ನಾಡಿನ ನಿಜವಾದ ಸಂಪತ್ತು ಶಾಲಾ ಮಕ್ಕಳು. ದೇಶ ಹಾಗೂ ನಾಡಿನ ಕೀರ್ತಿ ಬೆಳಗಿಸುವ ಮಕ್ಕಳಿಗೆ ದುಡಿಮೆಯ ಒಂದಿಷ್ಟು ಪಾಲನ್ನು ಸಮಾಜಕ್ಕಾಗಿ ವ್ಯಯಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಎಲ್ಲರೂ ಮುಕ್ತಮನಸ್ಸಿನಿಂದ ಸತ್ಕಾರ್ಯ ದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಸಂಘದ ತಾಲೂಕು ಉಪಾಧ್ಯಕ್ಷ ಬಿ.ಬಸವರಾಜ್ ಮಾತನಾಡಿ, ತಾಲೂಕಿನ ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಸಂಘದಿಂದ ನೋಟ್‌ಪುಸ್ತಕ ವಿತರಿಸಿದ್ದು ಇದನ್ನು ಮಕ್ಕಳು ಹಾಳುಮಾಡಿಕೊಳ್ಳದೇ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಮಂಜುನಾಥ್, ಕೆ.ಸಿ.ಮಾಸ್ತೇಗೌಡ, ಸುರೇಶ್, ಕೃಷ್ಣೇಗೌಡ, ತಮ್ಮೇಗೌಡ, ನಾಗರಾಜ್, ಧರ್ಮೇಗೌಡ, ಜೆ.ಎನ್.ಮಂಜೇಗೌಡ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net