ಮಲೆನಾಡು ಯುವತಿ ಮುಡಿಗೆ ಚಿನ್ನದ ಪದಕದ ಗರಿ

 ಸ್ನೇಹಾ
ಸ್ನೇಹಾ
Published on

ಪ್ರಮುಖ ಮುಖ್ಯಾಂಶಗಳು

  • ರಿಲೇ ಸ್ಪರ್ಧೆಯಲ್ಲಿ
  • ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್
  • ಪ್ರಮುಖಪಾತ್ರ ವಹಿಸಿದ್ದಾರೆ
ಶೃಂಗೇರಿ: ಕ್ಷೇತ್ರದ ಗ್ರಾಮೀಣ ಭಾಗದ ಯುವ ಪ್ರತಿಭೆಯೊಂದು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಮಿಂಚುತ್ತಿರುವುದು ದೇಶವೇ ಹೆಮ್ಮೆ ಪಡುವ ಸಂಗತಿ. ಅದರಲ್ಲೂ ಚೀನಾದಲ್ಲಿ ನಡೆದ ರಿಲೇ ಸ್ಪರ್ಧೆಯಲ್ಲಿ ಚೀನಾವನ್ನು ಸೋಲಿಸಿದ ಯುವತಿಯ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಕೊಪ್ಪ ತಾಲೂಕಿನ ಸ್ನೇಹಾ ಇಂಥ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ 4*100 ರಿಲೇಯಲ್ಲಿ ಚಿನ್ನದ ಪದಕ ಗೆದ್ದ ತಂಡದಲ್ಲಿ ಸ್ನೇಹಾ ಪ್ರಮುಖಪಾತ್ರ ವಹಿಸಿದ್ದಾರೆ. ಅದರಲ್ಲೂ ಚೀನಾ ವಿರುದ್ಧ ಭಾರತ ತಂಡ ಗೆದ್ದು ಬೀಗಿದೆ.
ಸ್ನೇಹಾ ಶಾನುವಳ್ಳಿ ಗ್ರಾಮದ ಎಸ್.ಎಸ್.ಸತ್ಯನಾರಾಯಣ ಮತ್ತು ಕೆ.ಎ.ಶಾಲಿನಿ ಅವರ ಪುತ್ರಿ. ಶೃಂಗೇರಿ ತಾಲೂಕಿನ ತೊರೆಹಡ್ಲು ಸರ್ಕಾರಿ ಪ್ರೌಢಶಾಲೆ ಹಿರಿಯ ವಿದ್ಯಾರ್ಥಿನಿ ಎನ್ನುವುದು ತಾಲೂಕಿಗೆ ಹೆಮ್ಮೆ. ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಶಾನುವಳ್ಳಿಯಲ್ಲಿ ಪಡೆದ ಬಳಿಕ ತೊರೆಹಡ್ಲು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು. ಹೈಸ್ಕೂಲ್ ಹಂತದಲ್ಲಿ ಅಥ್ಲೆಟಿಕ್ ವಿಭಾಗದಲ್ಲಿ ಹಲವಾರು ಸಾಧನೆ ಮಾಡಿದ ಪ್ರತಿಭಾವಂತ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದವರು.
ರಾಜ್ಯ ಮಟ್ಟದಲ್ಲಿ ನಡೆದ ರಿಲೇಯಲ್ಲಿ ಕಂಚಿನ ಪದಕ ಗಳಿಸಿದ್ದರು. ಬೆಂಗಳೂರಿನಲ್ಲಿ 2023ರಲ್ಲಿ ನಡೆದ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಬೆಳ್ಳಿ ಪದಕ ಗಳಿಸಿದ್ದರು. ಅದೇ ವರ್ಷ ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾಕೂಟದಲ್ಲಿ ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದುಕೊಂಡರು.
ತಮಿಳುನಾಡಿನಲ್ಲಿ ನಡೆದ ಆಲ್ ಇಂಡಿಯಾ ಯೂನಿವರ್ಸಿಟಿ ಸ್ಪರ್ಧೆಯಲ್ಲಿ ನೂರು ಮೀಟರ್ ರಿಲೇ ಸ್ಪರ್ಧೆಯಲ್ಲಿ ಹಾಗೂ 4100 ಮೀಟರ್ ರಿಲೇಯಲ್ಲಿ ರಜತ ಪದಕ ಪಡೆದರು. ಚೆನ್ನೈನಲ್ಲಿ ನಡೆದ ದಕ್ಷಿಣ ವಲಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಕೂಡಾ ನೂರು ಮೀಟರ್ ಮತ್ತು 4,100 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಪಡೆದರು. 
2025ರಲ್ಲಿ ದಕ್ಷಿಣಕೋರಿಯಾದಲ್ಲಿ ಜರುಗಿದ ಏಷಿಯನ್ ಚಾಂಪಿಯನ್‌ಶಿಪ್‌ನಲ್ಲಿ 400 ಮೀಟರ್ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದರು. ಈಗ ಏಷ್ಯನ್ ಗೇಮ್ಸ್ 4*100 ರಿಲೇಯಲ್ಲಿ ಚಿನ್ನದ ಪದಕ ಗೆದ್ದು ಮಲೆನಾಡಿನ ಪ್ರತಿಭೆ ಪ್ರಚಾರವಿಲ್ಲದೆ ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net