ಗುರಿ, ದುಡಿಮೆ, ಬೆವರು, ದೇವರು ಇದು `ಮುನಿಯನ ದನಿ'

ಚಿಕ್ಕಮಗಳೂರಿನಲ್ಲಿ ಮುನಿಯನ ದನಿ ಉಪನ್ಯಾಸ ನೀಡಿದ ಡಾ.ಎಸ್.ಶ್ರೀನಿವಾಸ ಶೆಟ್ಟಿ ದಂಪತಿಗಳನ್ನು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಸನ್ಮಾನಿಸಿದರು.
ಚಿಕ್ಕಮಗಳೂರಿನಲ್ಲಿ ಮುನಿಯನ ದನಿ ಉಪನ್ಯಾಸ ನೀಡಿದ ಡಾ.ಎಸ್.ಶ್ರೀನಿವಾಸ ಶೆಟ್ಟಿ ದಂಪತಿಗಳನ್ನು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಸನ್ಮಾನಿಸಿದರು.
Published on
ಚಿಕ್ಕಮಗಳೂರು: ಸ್ಪಷ್ಟವಾದ ಗುರಿಯೊಡನೆ ಅದನ್ನು ಮರೆಯದೇ ಬೆವರು ಸುರಿಸಿ ದುಡಿದಾಗ ದೇವರ ಇರುವಿಕೆಯ ಅನುಭವವಾಗುತ್ತದೆ ಎಂಬುದೇ ಡಿವಿಜಿಯವರ ಮರುಳು ಮುನಿಯನ ದನಿಯಾಗಿದೆ ಎಂದು ಮಂಡ್ಯದ ವಾಗ್ಮಿ ಡಾ.ಎಸ್.ಶ್ರೀನಿವಾಸ ಶೆಟ್ಟಿ ತಿಳಿಸಿದರು.
ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ, ಬಿರಂಜಿ ಅಕ್ವ ರೀಟ್ರೀಟ್, ಲಯನ್ಸ್ ಕ್ಲಬ್ ಹಾಗೂ ಕಲ್ಕಟ್ಟೆ ಪುಸ್ತಕದ ಮನೆ ಆಶ್ರಯದಲ್ಲಿ ನಗರದ ಶ್ರೀ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ `ಮುನಿಯನ ದನಿ' ಎರಡನೇ ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಿವಿಜಿಯವರ ಮರುಳು ಮುನಿಯನ ಕಗ್ಗದ ಕುರಿತು ಮಾತನಾಡಿದರು.
ಕಾಯವಿರುವುದೇ ಕರಗುವುದಕ್ಕಾಗಿ, ವಯಸ್ಸು ಮಾಗುತ್ತಾ ಮುಪ್ಪಾದ ಹಾಗೇ ಹೃದಯವರಳುತ್ತದೆ. ಅಜ್ಜ ಅಜ್ಜಿಯರ ಕೊನೆಯ ಗೆಳೆಯರೇ ಮೊಮ್ಮಕ್ಕಳು ಹಾಗೇ ಮೊಮ್ಮಕ್ಕಳ ಮೊದಲ ಗೆಳೆಯರೇ ಅಜ್ಜ ಅಜ್ಜಿ ಎನ್ನುವುದು ವಿಶೇಷ ಎಂದು ಹೇಳಿದರು.
ನಾಯಿ, ಬೆಕ್ಕು ಹಾಗೇ ಪ್ರತಿ ಜೀವಿಗಳನ್ನೂ ನೋಡಿ ಒಂದೊಂದು ಪಾಠ ಕಲಿಯಲು ಅವಕಾಶವಿದೆ. ಪ್ರಕೃತಿಯನ್ನು ನೋಡುತ್ತಾ ಬೆಳೆಯುವವರು ವಿಕೃತರಾಗುವುದಿಲ್ಲ. ಕಷ್ಟವೇ ಹೆಚ್ಚಿರಬೇಕು. ಆಗ ಕೃಷ್ಣನ ಧ್ಯಾನ ಮಾಡಬಹುದು ಎಂದು ಕುಂತಿ ಹೇಳಿದಳಂತೆ. ಹಾಗೇ, ಬದುಕು ಸದಾ ದೇವರಿಗೆ ಅವಲಂಬಿತವಾಗಿರುತ್ತದೆ ಎಂದುದಲ್ಲದೆ, ಮರುಳು ಮುನಿಯನ ಕಗ್ಗ, ಬೇಂದ್ರೆಯವರ ಕವನ, ದಿನಕರ ದೇಸಾಯಿಯವರ ಚುಟುಕ, ವೇದೋಪನಿಷತ್‌ಗಳ ಮರುಳ ಮುನಿಯನ ಕಗ್ಗದ ತೌಲನಿಕ ಅಧ್ಯಯನ ಪರಿಭಾಷೆಗಳನ್ನು ಅವರು ವಿಸ್ತರಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಪ್ರಾಯೋಜಕ ಸಂಘ-ಸಂಸ್ಥೆಗಳ ಪರವಾಗಿ ಡಾ.ಶ್ರೀನಿವಾಸ ಶೆಟ್ಟಿ ದಂಪತಿಯನ್ನು ಸನ್ಮಾನಿಸಿದರು.
ಶೆಟ್ಟರ ಬಗ್ಗೆ ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ಅಭಿನಂದನಾ ನುಡಿಯಾಡಿ, ಎರಡು ದಿನಗಳ. ಮುನಿಯನ ದನಿ ಕಾರ್ಯಕ್ರಮದಲ್ಲಿ ಡಿವಿಜಿಯವರ ಜ್ಞಾನದ ಅಳ ಮತ್ತು ಶ್ರೀನಿವಾಸ ಶೆಟ್ಟರ ಅಧ್ಯಯನದ ಗಂಭೀರತೆ ಎರಡೂ ಅರಿವಾಯಿತು. ಏಕಕಾಲದಲ್ಲಿ ಒಂದೇ ವಿಷಯದ ಬಗ್ಗೆ ಹಲವು ಬಗೆಯ ಚಿಂತನೆಗಳು ಹೇಗಿವೆ ಎಂದು ಹೇಳುವ ಇವರ ಕಲೆ ನಿಜಕ್ಕೂ ಶ್ರೇಷ್ಠ ಎಂದರು.
ಸಮಾರಂಭದಲ್ಲಿ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷ ಮಂಜುನಾಥ ಜೋಷಿ, ನಿರ್ದೇಶಕಿ ಎಸ್.ಶಾಂತಕುಮಾರಿ, ಬಿರಂಜಿ ಅಕ್ವ ರೀಟ್ರೀಟ್‌ನ ಎಂ.ಎ.ನಾಗೇಂದ್ರ, ಲಯನ್ಸ್ ಸಂಸ್ಥೆಯ ಅಧ್ಯಕ್ಷ ನಾರಾಯಣ ಸ್ವಾಮಿ, ಕಲ್ಕಟ್ಟೆ ಪುಸ್ತಕದ ಮನೆಯ ಅಧ್ಯಕ್ಷೆ ರೇಖಾ ನಾಗರಾಜರಾವ್, ಅನಿತಾ ಶೆಟ್ಟಿ, ಚಿತ್ರನಟಿ ಸಂಗೀತಾ ಶೆಟ್ಟಿ ಉಪಸ್ಥಿತರಿದ್ದರು. ನಾಗರಾಜರಾವ್ ಕಲ್ಕಟ್ಟೆ ನಿರೂಪಿಸಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net