ಸೀತೂರು ಸಾವಯವ ಕೃಷಿಕ ಮದ್ವರಾಜ್ ಅವರು ಸಾವಯವ ಕೃಷಿ ಪ್ರಾತ್ಯಕ್ಷಿಕೆ ನೀಡಿದರು. ಚೈತ್ರಶ್ರೀ, ಅರುಣಕುಮಾರ್, ಯಡಗೆರೆ ಸುಬ್ರಹ್ಮಣ್ಯ, ಎಚ್.ಇ.ದಿವಾಕರ, ಜಗದೀಶ್, ಕೆಸವಿ ಮಂಜುನಾಥ್, ಎಚ್.ಡಿ.ಲೋಕೇಶ್, ಕಣಬೈಲು ರಾಮಣ್ಣ ಇತರರಿದ್ದರು.
ಎನ್.ಆರ್.ಪುರ: ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿ ಹಾಳಾಗುತ್ತಿದ್ದು, ರೈತರು ಸಾವಯವ ಕೃಷಿಗೆ ಹೆಚ್ಚು ಗಮನ ನೀಡಬೇಕು ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಚೈತ್ರಶ್ರೀ ಹೇಳಿದರು.
ಗುರುವಾರ ತಾಲೂಕು ಬಿಜೆಪಿ ಮಂಡಲದಿಂದ ಸೀತೂರು ಸಾವಯವ ಕೃಷಿಕ ಮದ್ವರಾಜ್ ಅವರ ಕೃಷಿ ಭೂಮಿಯಲ್ಲಿ ಸಾವಯವ ಕೃಷಿ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರು ಸಾಂಪ್ರದಾಯಿಕ ಬೆಳೆಗಳಾದ ಅಡಿಕೆ, ಭತ್ತದ ಜತೆಗೆ ಮಿಶ್ರ ಬೆಳೆ ಬೆಳೆಯಬೇಕು. ಮೊದಲು ಮಣ್ಣು ಪರೀಕ್ಷೆ ಮಾಡಿಸಿ, ಅದರ ಆಧಾರದ ಮೇಲೆ ಗೊಬ್ಬರ ನೀಡಬೇಕು. ಕೃಷಿ ಜತೆಗೆ ಹಸು ಸಾಕಣೆ, ಅಣಬೆ ಕೃಷಿ, ತರಕಾರಿ ಬೆಳೆಯಿರಿ. ಜಿಲ್ಲಾ ಪಂಚಾಯಿತಿಯಲ್ಲಿ ರೈತರಿಗೆ ತರಬೇತಿ ಕಾರ್ಯಕ್ರಮವಿದ್ದು ಇದನ್ನು ಉಪಯೋಗಿಸಿಕೊಳ್ಳಿ. ಸೋಲಾರ್ ಅಳವಡಿಸಿದರೆ ಕೇಂದ್ರ ಸರ್ಕಾರದಿಂದ ಶೇ.90ರಷ್ಟು ರಿಯಾಯಿತಿ ಸಿಗಲಿದೆ. ನಾವು ರೈತರು ಎಂಬ ಕೀಳರಿಮೆ ಬಿಡಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅರುಣಕುಮಾರ್ ಮಾತನಾಡಿ, ದೇಶದಲ್ಲಿ ಅತಿ ಹೆಚ್ಚು ದಿನ ಪ್ರಧಾನಿಯಾದ ನರೇಂದ್ರ ಮೋದಿ ಅವರ ಆಶಯದಂತೆ ಪ್ರತಿ ತಾಲೂಕಿನಲ್ಲಿ ಬಿಜೆಪಿಯಿಂದ ಸಾವಯವ ಕೃಷಿ ಪದ್ಧತಿ ಮಾಡುತ್ತಿರುವ ಕೃಷಿಕರ ಜಮೀನಿನಲ್ಲಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳುತ್ತಿದ್ದೇವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದು ಪ್ರಥಮ ಕಾರ್ಯಕ್ರಮ ಎಂದರು.
ಸೀತೂರು ವಿಎಸ್‌ಎಸ್‌ಎನ್ ನಿರ್ದೇಶಕ ಯಡಗೆರೆ ಸುಬ್ರಹ್ಮಣ್ಯ ಮಾತನಾಡಿ, ಕೇಂದ್ರ ಸರ್ಕಾರ ರೈತರ ಜೀವನ ಉತ್ತಮವಾಗಿರಬೇಕು ಹಾಗೂ ದೇಶದ ಜನರು ಆರೋಗ್ಯವಾಗಿರಬೇಕು ಎಂಬ ಉದ್ದೇಶದಿಂದ ಮೇಕ್ ಇನ್ ಇಂಡಿಯಾ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಹಂತ ಹಂತವಾಗಿ ರಾಸಾಯನಿಕ ಗೊಬ್ಬರ ಕಡಿಮೆ ಮಾಡಿ ಸಾವಯವ ಕೃಷಿ ಮಾಡಬೇಕಾಗಿದೆ ಎಂದರು.
ಸಾವಯವ ಕೃಷಿಕ ಮದ್ವರಾಜ್ ಅವರು ಜಮೀನಿನಲ್ಲಿ ಅಳವಡಿಸಿರುವ ಜೀವಾಮೃತ ಪದ್ಧತಿ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ರೈತರಿಗೆ ವಿವರಿಸಿದರು.
ತಾಲೂಕು ಬಿಜೆಪಿ ಉಪಾಧ್ಯಕ್ಷರಾದ ಎಚ್.ಇ.ದಿವಾಕರ, ಜಗದೀಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಕೆಸವಿ ಮಂಜುನಾಥ್, ಹೋಬಳಿ ಅಧ್ಯಕ್ಷ ಎಚ್.ಡಿ.ಲೋಕೇಶ್, ತಾಲೂಕು ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಣಬೈಲು ರಾಮಣ್ಣ ಇತರರಿದ್ದರು.