ಬಾಳೆಹೊನ್ನೂರು: ಸಕಲ ಜೀವಿಗಳಿಗೆ ಆಧಾರವಾಗಿರುವ ಪರಿಸರವನ್ನು ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ ಎಂದು ಆರ್‌ಎಫ್‌ಒ ಮಂಜುನಾಥ್ ಹೇಳಿದರು.
ಬಿ.ಕಣಬೂರು ಗ್ರಾಪಂನಲ್ಲಿ ವಲಯ ಅರಣ್ಯ ಇಲಾಖೆ ಹಾಗೂ ಬಿ.ಕಣಬೂರು ಗ್ರಾಪಂ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.
ಅತಿಯಾದ ರಾಸಾಯನಿಕಗಳ ಬಳಕೆಯಿಂದ ಭೂಮಿ ಸತ್ವ ಕಳೆದುಕೊಳ್ಳುತ್ತಿದೆ. ರಾಸಾಯನಿಕದಿಂದ ಉತ್ತಮ ಆಹಾರ ಬೆಳೆಗಳು ನಮಗೆ ದೊರೆಯದೆ ವಿಷಪೂರಿತ ಆಹಾರವನ್ನೇ ನಾವು ಸೇವಿಸುವಂತಾಗಿದೆ. ಇದರಿಂದಾಗಿ ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮ ಬೀರುತ್ತಿದೆ. ಪರಿಸರವೂ ಸಾಕಷ್ಟು ಕಲುಷಿತವಾಗಿದೆ. ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ ಎಂದರು.
ಜೆಸಿಐ ಮಾಜಿ ಅಧ್ಯಕ್ಷ ಇಬ್ರಾಹಿಂ ಶಾಫಿ ಮಾತನಾಡಿ, ಮನುಷ್ಯನ ಅತಿಯಾದ ಆಸೆಯಿಂದ ಪರಿಸರ ಕಲುಷಿತವಾಗುತ್ತಿದೆ. ನಮ್ಮೆಲ್ಲರನ್ನೂ ಹೊತ್ತು ರಕ್ಷಣೆ ಮಾಡುತ್ತಿರುವ ಭೂಮಾತೆಗೆ ಪ್ರತಿದಿನವೂ ನಮಿಸಿ ನಮ್ಮ ನಿತ್ಯದ ಕಾರ್ಯಗಳನ್ನು ಆರಂಭಿಸುವುದರಿಂದ ನಮಗೆ ಶ್ರೇಯಸ್ಸು ಲಭಿಸಲಿದೆ ಎಂದರು.
ಬಿ.ಕಣಬೂರು ಗ್ರಾಪಂ ಮಾಜಿ ಸದಸ್ಯರಾದ ಬಿ.ಕೆ.ಮಧುಸೂದನ್, ಎಂ.ಜೆ.ಮಹೇಶ್ ಆಚಾರ್ಯ, ಮಹಮ್ಮದ್ ಜುಹೇಬ್, ಅರುಣ್‌ಕುಮಾರ್, ಗ್ರಾಮ ಆಡಳಿತಾಧಿಕಾರಿ ಸಮೀಕ್ಷಾ, ನಾಗಶ್ರೀ, ಗ್ರಾಪಂ ಸಿಬ್ಬಂದಿ ಸಂಪೂರ್ಣಾ, ಶ್ಯಾಮಲಾ, ಡಿಆರ್‌ಎಫ್‌ಒ ನವೀನ್ ಇತರರಿದ್ದರು.