ಉತ್ತಮ ಶಿಕ್ಷಣ ಪಡೆದು ಉನ್ನತ ಭವಿಷ್ಯ ರೂಪಿಸಿಕೊಳ್ಳಿ

ಆಲ್ದೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ನೂತನ ಕಟ್ಟಡ ನಿರ್ಮಾಣಕ್ಕೆ ಎಂಎಲ್‌ಸಿ ಸಿ.ಟಿ.ರವಿ ಗುದ್ದಲಿ ಪೂಜೆ ನೆರವೇರಿಸಿದರು.
ಆಲ್ದೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ನೂತನ ಕಟ್ಟಡ ನಿರ್ಮಾಣಕ್ಕೆ ಎಂಎಲ್‌ಸಿ ಸಿ.ಟಿ.ರವಿ ಗುದ್ದಲಿ ಪೂಜೆ ನೆರವೇರಿಸಿದರು.
Published on
ಆಲ್ದೂರು: ಇಂದು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಸೇವಾ ಮನೋಭಾವದಿಂದ ವ್ಯಾಪಾರೀಕರಣವಾಗುತ್ತಿರುವುದು ವಿಷಾದನೀಯ. ಶಿಕ್ಷಣ ಮತ್ತು ಆರೋಗ್ಯ ಈ ಎರಡು ಸೇವೆಗಳು ಉಚಿತವಾಗಿ ದೊರೆತಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಕಟ್ಟಡ ದಾನಿ ಶ್ಯಾಮ್‌ಪ್ರಸಾದ್ ಭಟ್ ತಿಳಿಸಿದರು.
ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿ,ಆಲ್ದೂರು ಸುತ್ತಮುತ್ತಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಲ್ಲಿ ಸರ್ಕಾರಿ ಶಾಲೆಗೆ ಸುಮಾರು 3 ರಿಂದ 5 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಂಎಲ್‌ಸಿ ಸಿ.ಟಿ.ರವಿ ಮಾತನಾಡಿ, ಸಿಎಸ್‌ಆರ್ ಅನುದಾನದ ಜತೆಗೆ ತಮ್ಮ ವೈಯಕ್ತಿಕ ಅನುದಾನವನ್ನು ನೀಡಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಕೈ ಜೋಡಿಸಿರುವ ವಿದ್ಯಾ ಕಾಫಿ ಸಂಸ್ಥೆ ಮಾಲೀಕರಾದ ಶ್ಯಾಮ್ ಪ್ರಸಾದ್ ಭಟ್ ಅವರ ಕಾರ್ಯ ಶ್ಲಾಘನೀಯ. ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿ ಒಂದು ವರ್ಷದಲ್ಲಿ ಶಾಲೆ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ, ಉತ್ತಮ ಶಿಕ್ಷಣ ಬಹುಮುಖ್ಯ. ಶಿಕ್ಷಣದ ಮೂಲಕ ದೇಶವನ್ನು ಸದೃಢವನ್ನಾಗಿ ಮಾಡಬಹುದು. ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ಅಗತ್ಯ ಎಂದರು.
ಡಿಡಿಪಿಐ ತಿಮ್ಮರಾಜು ಮಾತನಾಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯನ್ನು ಕೆಪಿಎಸ್ ಶಾಲೆಯಾಗಿ ಮೆಲ್ದರ್ಜೆಗೇರಿಸಲಾಗಿದೆ. ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರಗೆ ಈ ಕಟ್ಟಡದಲ್ಲಿ ತರಗತಿಗಳು ನಡೆಯಲಿವೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ, ವಿದ್ಯಾ ಫೌಂಡೇಷನ್‌ನ ವೀಣಾ ಶ್ಯಾಮ್ ಪ್ರಸಾದ್ ಭಟ್, ವಿದ್ಯಾ ಭಟ್, ಸಂಸ್ಥೆ ನಿರ್ವಾಹಕ ಮುಖ್ಯಸ್ಥರಾದ ಭಾನುಪ್ರಕಾಶ್, ಸ್ಥಳ ದಾನಿಗಳಾದ ಬಿ.ಎಸ್ ಚಂದ್ರಶೇಖರ್, ಎಸ್‌ಡಿಎಂಸಿ ಅಧ್ಯಕ್ಷ ಪ್ರಮೋದ್ ಪರಮೆಶ್, ಮುಖಂಡರಾದ ಸಿ.ಸುರೇಶ್, ಪೂರ್ಣೇಶ್, ಸಂಪತ್ ಹೆಡದಾಳ್, ಭವ್ಯ ನಟೇಶ್, ಜಿ.ಯು.ರಘು, ರಮೇಶ್ ಆಚಾರ್ಯ ಎ.ಯು ಇಬ್ರಾಹಿಂ, ದೇವೆಂದ್ರಪ್ಪ, ಮುಖ್ಯ ಶಿಕ್ಷಕಿ ಕಮಲಾಕ್ಷಿ, ಅಶೋಕ್, ಹೊನ್ನಪ್ಪ, ಡಿ.ಬಿ.ಅಶೋಕ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net