ಕೊನೆ ಕ್ಷಣದಲ್ಲಿ ಗಾಯತ್ರಿ ಶಾಂತೇಗೌಡರಿಗೆ ತಪ್ಪಿದ ಸಚಿವ ಸ್ಥಾನ

ಸಚಿವ ಸ್ಥಾನ ವಂಚಿತ ವಿಧಾನ ಪರಿಷತ್‌ ಸದಸ್ಯೆ ಗಾಯತ್ರಿ ಶಾಂತೇಗೌಡ
ಸಚಿವ ಸ್ಥಾನ ವಂಚಿತ ವಿಧಾನ ಪರಿಷತ್‌ ಸದಸ್ಯೆ ಗಾಯತ್ರಿ ಶಾಂತೇಗೌಡ
Published on
ಚಿಕ್ಕಮಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕೊನೆ ಕ್ಷಣದ ರಾಜಕೀಯ ಬೆಳವಣಿಗೆಗಳ ಪರಿಣಾಮವಾಗಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಆರಂಭದಲ್ಲಿ ಸಚಿವರ ಪಟ್ಟಿಯಲ್ಲಿ ಅವರ ಹೆಸರು ಸೇರಿದೆ ಎಂಬ ಮಾಹಿತಿ ಹರಿದಾಡಿದ್ದರಿಂದ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.
ಸಚಿವ ಸ್ಥಾನ ಖಚಿತ ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಹಲವು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಬೆಂಗಳೂರಿಗೆ ತೆರಳಿ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದರು. ಆದರೆ ಮಧ್ಯಾಹ್ನದ ವೇಳೆಗೆ ಪಕ್ಷದೊಳಗೆ ನಡೆದ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ಹಾಗೂ ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಉಮಾಶ್ರೀ ಅವರು ವ್ಯಕ್ತಪಡಿಸಿದ ಆಕ್ಷೇಪಗಳ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಸಚಿವರ ಪಟ್ಟಿಯಲ್ಲಿ ಬದಲಾವಣೆ ನಡೆದಿದ್ದು, ಗಾಯತ್ರಿ ಶಾಂತೇಗೌಡ ಅವರ ಹೆಸರು ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿಯಿಂದ ಕರೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದ ಗಾಯತ್ರಿ ಶಾಂತೇಗೌಡ ಅವರಿಗೆ ಅಂತಿಮ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿರುವುದು ಅವರ ಬೆಂಬಲಿಗರಿಗೆ ತೀವ್ರ ನಿರಾಸೆ ಉಂಟುಮಾಡಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಐವರು ವಿಧಾನಸಭಾ ಸದಸ್ಯರು ಹಾಗೂ ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದರೂ, ಜಿಲ್ಲೆಗೆ ಸಚಿವ ಸ್ಥಾನ ದೊರೆಯದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಜಿಲ್ಲಾ ಶಾಸಕರನ್ನು ಪರಿಗಣಿಸದೇ ಗಾಯತ್ರಿ ಶಾಂತೇಗೌಡ ಅವರಿಗೆ ಅವಕಾಶ ನೀಡುವ ಚರ್ಚೆ ನಡೆದಿದ್ದರೂ ಅದು ಕೊನೆ ಕ್ಷಣದಲ್ಲಿ ಫಲಿಸಿಲ್ಲ. ಇದೇ ವೇಳೆ ಸಚಿವ ಸ್ಥಾನದ ಮತ್ತೊಬ್ಬ ಪ್ರಮುಖ ಆಕಾಂಕ್ಷಿಯಾಗಿದ್ದ ಆರತಿ ಕೃಷ್ಣ ಅವರಿಗೂ ಅವಕಾಶ ದೊರೆಯದಿರುವುದು ಪಕ್ಷದೊಳಗಿನ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ.
ಚಿಕ್ಕಮಗಳೂರು ಜಿಲ್ಲೆಗೆ ಕಳೆದ ಸುಮಾರು ಎರಡು ದಶಕಗಳಿಂದ ಸಚಿವ ಸ್ಥಾನ ದೊರೆಯದೇ ಇರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲೆಯನ್ನು ಪ್ರತಿನಿಧಿಸುವ ಐವರು ಶಾಸಕರು ಹಾಗೂ ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದರೂ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ಸಿಗದಿರುವುದು ಜಿಲ್ಲೆಯ ಅಭಿವೃದ್ಧಿ ಹಾಗೂ ರಾಜಕೀಯ ಪ್ರಭಾವದ ದೃಷ್ಟಿಯಿಂದ ಹಿನ್ನಡೆಯಾಗಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
ಚಿಕ್ಕಮಗಳೂರು ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಕುರುಬ ಸಮುದಾಯಕ್ಕೆ ಇದುವರೆಗೆ ಸಚಿವ ಸ್ಥಾನ ದೊರೆತಿರಲಿಲ್ಲ. ಈ ಬಾರಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರ ಮೂಲಕ ಮೊದಲ ಬಾರಿಗೆ ಕುರುಬ ಸಮುದಾಯಕ್ಕೆ ಸಚಿವ ಸ್ಥಾನ ದೊರೆಯಲಿದೆ ಎಂಬ ನಿರೀಕ್ಷೆ ಜಿಲ್ಲೆಯಾದ್ಯಂತ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಮೂಡಿತ್ತು. ಆದರೆ ಕೊನೆ ಕ್ಷಣದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಿಂದ ಆ ಅವಕಾಶ ಕೈತಪ್ಪಿದ್ದು, ಕಳೆದ ಎರಡು ದಶಕಗಳಿಂದ ಚಿಕ್ಕಮಗಳೂರು ಜಿಲ್ಲೆಗೆ ಸಚಿವ ಸ್ಥಾನ ಸಿಗದಿರುವ ಬೇಸರದ ಜೊತೆಗೆ ಕುರುಬ ಸಮುದಾಯದ ಮೊದಲ ಸಚಿವ ಸ್ಥಾನದ ಕನಸೂ ನನಸಾಗದಂತಾಗಿದೆ. ಇದರಿಂದ ಸಮುದಾಯದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ತೀವ್ರ ನಿರಾಸೆ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net