ವಿವಿಧ ಮೀಸಲು ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆಯಲ್ಲಿ ಮನೆ, ಅಂಗಡಿ ಮುಂತಾದವುಗಳ ಕಸವನ್ನು ರಾಶಿಗಟ್ಟಲೇ ತಂದುಹಾಕುತ್ತಿದ್ದು, ಇದರಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಬಾಳೆಹೊನ್ನೂರಿನಿಂದ ಹಲಸೂರು-ನೇಮನಹಳ್ಳಿ ಹೋಗುವ ರಸ್ತೆ ಬದಿ ಕೆಲವು ದಿನಗಳಿಂದ ರಾತ್ರಿ ವೇಳೆ ಕೆಲವರು ವಾಹನಗಳಲ್ಲಿ ಮನೆ, ಅಂಗಡಿಯ ಕಸ ತಂದು ಸುರಿಯುತ್ತಿರುವುದರಿಂದ ಲೋಡುಗಟ್ಟಲೇ ತ್ಯಾಜ್ಯ ರಾಶಿಯಾಗಿ ಗಬ್ಬು ನಾರುತ್ತಿದೆ. ಇತರ ಪ್ರದೇಶಗಳಲ್ಲೂ ಇದೇ ರೀತಿಯಲ್ಲಿ ಪ್ಲಾಸ್ಟಿಕ್ ಇತರ ತ್ಯಾಜ್ಯವನ್ನು ತಂದುಹಾಕುತ್ತಿದ್ದು ಪರಿಸರವನ್ನು ತೀವ್ರ ಹಾಳುಮಾಡುತ್ತಿದ್ದಾರೆ. ಇದರಿಂದಾಗಿ ಇಲ್ಲಿರುವ ಕೆಲವು ವನ್ಯಜೀವಿಗಳು, ಸ್ಥಳೀಯರ ಗೋವುಗಳಿಗೂ ಸಮಸ್ಯೆಯಾಗುತ್ತಿದೆ. ಪ್ಲಾಸ್ಟಿಕ್ ಇತರ ತ್ಯಾಜ್ಯವನ್ನು ತಿಂದು ಆರೋಗ್ಯ ಹಾಳುಮಾಡಿಕೊಳ್ಳುತ್ತಿವೆ. ಇದರೊಂದಿಗೆ ಚಿಕ್ಕಮಗಳೂರು ಮುಖ್ಯರಸ್ತೆಯ ಬಸವನಕೋಟೆ ಅರಣ್ಯ ಪ್ರದೇಶದಲ್ಲೂ ಇದೇ ರೀತಿ ಪಟ್ಟಣದ ಕೆಲವು ಮನೆ, ಅಂಗಡಿಗಳ ತ್ಯಾಜ್ಯವನ್ನು ತಂದು ಹಾಕಿ ಪರಿಸರ ಹಾಳುಮಾಡುತ್ತಿದ್ದಾರೆ.