ಕೃಷಿಕರ ಕಿರುಕುಳಕ್ಕೆ ಬಳಕೆಯಾಗುತ್ತಿವೆ ಅರಣ್ಯ ಕಾಯ್ದೆಗಳು

 ಜನಶಕ್ತಿ ಸಂಘಟನೆ ಸದಸ್ಯರು ಕೊಪ್ಪ ತಹಸೀಲ್ದಾರ್ ಲಿಖಿತ ಮೋಹನ್ ಮನವಿಗೆ ಮನವಿ ಸಲ್ಲಿಸಿದರು.
ಜನಶಕ್ತಿ ಸಂಘಟನೆ ಸದಸ್ಯರು ಕೊಪ್ಪ ತಹಸೀಲ್ದಾರ್ ಲಿಖಿತ ಮೋಹನ್ ಮನವಿಗೆ ಮನವಿ ಸಲ್ಲಿಸಿದರು.
Published on
ಜಯಪುರ: ಜನಸಾಮಾನ್ಯರಿಗೆ ಅನುಕೂಲವಾಗ ಬೇಕಾಗಿದ್ದ ಅರಣ್ಯ ಕಾಯ್ದೆಗಳು, ಅಧಿಕಾರಿಗಳ ಭ್ರಷ್ಟಾಚಾರದಿಂದ ಬಲಾಡ್ಯರ ಅನುಕೂಲಕ್ಕೆ ಬಳಕೆಯಾಗುತ್ತಿದ್ದು, ಬದುಕಿಗಾಗಿ ಕೃಷಿ, ಮನೆ ಮಾಡಿಕೊಂಡ ಜನಸಾಮನ್ಯರ ಕಿರುಕುಳಕ್ಕೆ ಈ ಕಾಯ್ದೆಗಳು ಬಳಕೆಯಾಗುತ್ತಿದೆ ಎಂದು ಹೋರಾಟಗಾರ ಕಲ್ಕುಳಿ ವಿಠಲ ಹೆಗ್ಡೆ ಆರೋಪಿಸಿದರು.
ಜಯಪುರದಲ್ಲಿ ಜನಶಕ್ತಿ ಸಂಘಟನೆ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಅರಣ್ಯ ಒತ್ತುವರಿ ತೆರವಿಗೆ ಶೃಂಗೇರಿ ವ್ಯಾಪ್ತಿಯಲ್ಲಿ 472 ಜನರಿಗೆ ಅರಣ್ಯಇಲಾಖೆ ನೋಟೀಸ್ ನೀಡಿದೆ. ಅದರಲ್ಲಿ 396 ಜನ ಬದುಕಿಗಾಗಿಒತ್ತುವರಿ ಮಾಡಿ ಮನೆ ನಿರ್ಮಿಸಿದ್ದಾರೆ. ಇದರಲ್ಲಿ ಕಾಡುನಾಶ ಮಾಡಿ ಹತ್ತಾರು ಎಕರೆ ಒತ್ತುವರಿ ಮಾಡಿರುವ ಭೂ ಮಾಲೀಕರು, ಕಂಪನಿ ಎಸ್ಟೇಟ್‌ಗಳ ಹೆಸರಿಲ್ಲ. ಅವರಿಗೆ ನೋಟೀಸ್ ನೀಡುವುದಿರಲಿ, ಅವರ ತೋಟದ ಗೇಟ್ ದಾಟುವ ಥೈರ್ಯ ಅರಣ್ಯ ಇಲಾಖೆ ಅಧಿಕಾರಿಗಳಿಗಿಲ್ಲ ಎಂದರು.
ಎರಡುವರೆ ಎಕರೆ ಜಾಗದಲ್ಲಿ 25 ಮರ ಇರುವ ಪ್ರದೇಶವನ್ನು ಅರಣ್ಯ ಎಂದು ಘೋಷಿಸಿರುವ ಸುಪ್ರೀಂ ಕೋರ್ಟ್ ಆದೇಶದಲ್ಲಿ ದೋಷವಿದೆ. ಕೇಂದ್ರ ಸರ್ಕಾರವೇ ಇದರ ತಿದ್ದುಪಡಿ ಮಾಡಿ ಕಾಯ್ದೆ ಜಾರಿಗೆ ತಂದರೆ ಮಾತ್ರ ರೈತರ, ಬಡವರ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.
ಹೋರಾಟಗಾರ ಕೆ.ಎಲ್.ಅಶೋಕ್ ಮಾತನಾಡಿ, ಸರ್ಕಾರಗಳಿಗೆ ನಿಜವಾದ ಕಾಳಜಿ ಇಲ್ಲ. ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡದೇ ಮುಂದೆ ಹಾಕುವ ಕೆಲಸ ಮಾಡಲಾಗುತ್ತಿದೆ. ಇನ್ನೆಷ್ಟು ದಿನ ಬಡವರು ವಸತಿ ಇಲ್ಲದೆ ಬಾಡಿಗೆ ಮನೆಯಲ್ಲಿ ಬದುಕಬೇಕು. ಇನ್ನೆಷ್ಟು ದಿನ ರೈತರು ಮಾಡಿದ ಸಾಗುವಳಿ ಜಮೀನಿನ ಸಾಗುವಳಿ ಚೀಟಿಗೆ ಭಿಕ್ಷೆ ಬೇಡಬೇಕು. ಸರ್ಕಾರಗಳು ಬಡವರ ಪರ ನಿಂತು ಅಗತ್ಯ ಕಾನೂನು ರೂಪಿಸಬೇಕು ಎಂದರು.
ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರಿದ್ದು, ಆನೆ, ಕಾಡುಕೋಣಗಳ ದಾಳಿಯಿಂದ ನಾಗರಿಕರಿಗೆ ರಕ್ಷಣೆ ಇಲ್ಲದಾಗಿದೆ. ಅರಣ್ಯ ಇಲಾಖೆ ಅರಣ್ಯದೊಳಗೆ ಗಿಡಗಳನ್ನು ಬೆಳೆಸುವ, ಹಣ ಮಾಡುವುದನ್ನು ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದರು.
ಹೋರಾಟಗಾರರಿಂದ ಮನವಿ ಸ್ವೀಕರಿಸಿದ ಶಾಸಕ ರಾಜೇಗೌಡ ಮಾತನಾಡಿ, ಸರ್ಕಾರ ನಡೆಸುತ್ತಿರುವ ಜಂಟಿ ಸರ್ವೇಯಿಂದ ನಿರ್ದಿಷ್ಟವಾಗಿ ಅರಣ್ಯ ಭೂಮಿ ಮಾಹಿತಿ ಸಿಗಲಿದೆ. ಇದರಿಂದ ಅರಣ್ಯ ಹೊರತಾದ ಕಂದಾಯ ಭೂಮಿ ವಿವರ ಸಿಗಲಿದೆ. ಅಂತಹ ಭೂಮಿಗೆ ಹಕ್ಕುಪತ್ರ ನೀಡಲು ಇದರಿಂದ ಅನುಕೂಲವಾಗಲಿದೆ ಎಂದರು.
ಆಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿಕಲ್ಲಿನಿಂದ ಜಯಪುರದವರೆಗೆ ಜನಜಾಗೃತಿ ಪಾದಯಾತ್ರೆ ನಡೆಸಲಾಯಿತು. ಕೊಪ್ಪ ತಹಸೀಲ್ದಾರ್ ಲಿಖಿತ ಮೋಹನ್ ಮನವಿ ಸ್ವೀಕರಿಸಿದರು. ಆರ್‌ಎ್ಒ ಮಧುಕರ್ ಹಾಗೂ ಪಿಎಸ್‌ಐ ರವೀಶ್, ಹೋರಾಟಗಾರಾದ ರಾಮು ಕೌಳಿ, ವೆಂಕಟೇಶ್, ಸುರೇಶ, ರಾಧಾ ಹಾಗಲಗಂಚಿ, ಅತ್ತಿಕುಳಿ ಸುಂದರೇಶ್, ಕೃಪಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net