ಎಂ.ಸಿ.ಹಳ್ಳಿ ಭದ್ರಗಿರಿ ಶ್ರೀ ಶಿವ ಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ಆಡಿ ಕೃತಿಕ ಕಾವಡಿ ಜಾತ್ರಾ ಮಹೋತ್ಸವದ ಧ್ವಜಾರೋಹಣ ನೆರವೇರಿಸಲಾಯಿತು. ಎಂ.ಚಂದ್ರಘೋಷನ್, ಸೋಮರಾಜ್, ತಿರುಮೂರ್ತಿ, ಡಾ. ವಿಕ್ರಂ, ನಲ್ಲುಸ್ವಾಮಿ ಇತರರಿದ್ದರು.
ತರೀಕೆರೆ: ಎಂ.ಸಿ.ಹಳ್ಳಿ ಭದ್ರಗಿರಿ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಆ.6ರಂದು ವೈಭವದ ಆಡಿ ಕೃತಿಕ ಕಾವಡಿ ಜಾತ್ರಾ ಮಹೋತ್ಸವ ನಡೆಯುವ ಹಿನ್ನೆಲೆಯಲ್ಲಿ ಶನಿವಾರ ದೇಗುಲ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ಮೂಲ ದೇವರಿಗೆ ಹಾಲು, ತುಪ್ಪ, ಮೊಸರು, ಎಳನೀರು, ಜೇನುತುಪ್ಪ ಇತರ ಸಗಂಧ ದ್ರವ್ಯಗಳಿಂದ ಅಭಿಷೇಕ ಮಾಡಲಾಯಿತು. ವಿವಿಧ ಹೂವುಗಳಿಂದ ಅಲಂಕಾರಗೊಳಿಸಿದ ದೇವರ ಮೂಲಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಗಣಹೋಮದೊಂದಿಗೆ ಧ್ವಜಾರೋಹಣ ನೆರವೇರಿಸಲಾಯಿತು. ಭದ್ರಾವತಿ, ಎಂ.ಸಿ.ಹಳ್ಳಿ, ಕೃಷ್ಣಾಪುರ ಮತ್ತಿತರ ಕಡೆಯಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದರು.
ದೇಗುಲದ ಆಡಳಿತಾಧಿಕಾರಿ ಎಂ.ಚಂದ್ರಘೋಷನ್ ಮಾತನಾಡಿ, ಶ್ರೀಕ್ಷೇತ್ರ ಭದ್ರಗಿರಿಯಲ್ಲಿ ವಳ್ಳಿ-ದೇವಸೇನ ಸಮೇತ ನೆಲೆಸಿರುವ ಶ್ರೀ ಶಿವಸುಬ್ರಹ್ಮಣ್ಯಸ್ವಾಮಿಯ ಆಡಿ ಕೃತಿಕ ಕಾವಡಿ ಜಾತ್ರಾ ಮಹೋತ್ಸವ ಪ್ರತಿ ವರ್ಷ ವಿಜೃಂಭಣೆಯಿಂದ ನೆರವೇರಿಸಲಾಗುತ್ತಿದೆ. ಹೊರ ರಾಜ್ಯಗಳಿಂದಲೂ ಭಕ್ತರು ಕಾವಡಿ ಹೊತ್ತು ಹರಕೆ ತೀರಿಸುತ್ತಾರೆ. ಭಕ್ತರಿಗೆ ಅನ್ನದಾಸೋಹದ ಜತೆ ತರೀಕೆರೆ ಮತ್ತು ಭದ್ರಾವತಿಯಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಭದ್ರಗಿರಿ ಸೇವಾ ಸಮಿತಿ ಅಧ್ಯಕ್ಷ ಸೋಮರಾಜ್, ಪ್ರಮುಖರಾದ ತಿರುಮೂರ್ತಿ, ನಾಗರಾಜ್, ಡಾ. ವಿಕ್ರಂ, ಕಾರ್ತಿಕ್, ವಡಿವೇಲು, ಅಯ್ಯಪ್ಪ, ಗಾಂಧಿ, ಪರಮೇಶ್, ವೆಂಕಟೇಶ್, ನಲ್ಲುಸ್ವಾಮಿ, ಚಿನ್ನಕುಟ್ಟಿ ಮತ್ತಿತರರಿದ್ದರು.