

ಅಕಾಡೆಮಿಕ್ ವಲಯದಿಂದ ಪಡೆದ ವಿದ್ಯೆ ಅಳೆಯುವ ಮಾನದಂಡಕ್ಕೆ ನಿಗದಿಪಡಿಸಬಹುದಾದ ಸೀಮಿತ ವ್ಯಾಪ್ತಿಯ ಕುರುಹು ಅಷ್ಟೇ. ಆದರೆ ಅದೇ ವಿದ್ಯೆಯನ್ನು ಗಳಿಸಿದ ನಂತರ ಬಳಸುವ ವಿಧಾನದಲ್ಲಿ ವಹಿಸಬೇಕಾದ ಜಾಣ್ಮೆ ಮತ್ತು ಎಚ್ಚರಿಕೆಯೇ ಬುದ್ದಿ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ತಿಳಿಸಿದರು
.
ತಾಲೂಕಿನ ಬಿಳಿಕಲ್ಲಹಳ್ಳಿ ಗ್ರಾಮದ ಕೃಷಿಕ ಹಾಗೂ ಉದ್ಯಮಿ ಲಯನ್ ಗೋಪಿಕೃಷ್ಣ ಅವರ ಮನೆ ಅಂಗಳದಲ್ಲಿ ನಡೆದ 21ನೇ ದಿನದ ಶ್ರಾವಣ ಸಂಜೆಯ ಮನೆ ಮನದೆಡೆಗೆ ಶುದ್ಧ ನುಡಿ ನಡಿಗೆ ಕಾರ್ಯಕ್ರಮದಲ್ಲಿ ವಿದ್ಯೆ ಒಕ್ಕಾಲು-ಬುದ್ದಿ ಮುಕ್ಕಾಲು ಎಂಬ ವಿಷಯದ ಮೇಲೆ ಪ್ರಧಾನ ಉಪನ್ಯಾಸ ನೀಡಿದ ಅವರು, ವಿದ್ಯೆ ಮತ್ತು ಬುದ್ದಿ ಇವೆರಡನ್ನೂ ಮೀರಿದ ಜೀವನಾನುಭವದ ಪಾಠವೇ ಘನ ಜ್ಞಾನ ಎಂದು ಹೇಳಿದರು.
ನಾಲ್ಕು ಗೋಡೆಗಳ ನಡುವೆ ಕೊಠಡಿ ಒಳಗೆ ಸಿಗುವ ಶಿಕ್ಷಣಕ್ಕಿಂತ ಮುಕ್ತ ಬಯಲಿನಲ್ಲಿ ಪ್ರಕೃತಿ ಮತ್ತು ಸಮಾಜದ ಜೊತೆ ಬೆರೆತು ವಿವೇಕದ ಸಂಪತ್ತು ಪಡೆದ ಜಾನಪದರು ಕೊಟ್ಟ ಸೂತ್ರವೇ ವಿದ್ಯೆ ಒಕ್ಕಾಲು ಬುದ್ದಿ ಮುಕ್ಕಾಲು ಎಂಬ ನಾಣ್ಣುಡಿ ಎಂದು ವಿಶ್ಲೇಷಣೆ ಮಾಡಿದರು.
ತಪ್ಪು ಒಪ್ಪುಗಳ ವಿಷಯ ವಿವರಣೆಯ ಮಾಹಿತಿಯನ್ನು ವಿದ್ಯೆ ಕಲಿಸಿದರೆ, ಅವೆರಡನ್ನೂ ತರ್ಕಿಸಿ ವಿಶ್ಲೇಷಿಸುವ ಸಾಮರ್ಥ್ಯವನ್ನು ಬುದ್ಧಿ ಕಲಿಸುತ್ತದೆ. ಇವೆರಡರ ನಿಯಂತ್ರಣದೊಂದಿಗೆ ಒಪ್ಪವಾದುದನ್ನು ಮಾತ್ರ ಸ್ವೀಕರಿಸುವ ಅನುಭವಪ್ರಜ್ಞೆಯೇ ವಿವೇಕವೆಂಬ ಪರಮಜ್ಞಾನ ಎಂದು ಹಲವು ವಚನಗಳು ಮತ್ತು ಸಾಹಿತ್ಯದ ಉಕ್ತಿಗಳ ಉದಾಹರಣೆಯೊಂದಿಗೆ ವಿವರಿಸಿದರು.
ಈಗಿನ ಕೃಷಿ ಕಾಲೇಜುಗಳ ಆರಂಭಕ್ಕೂ ಸಾವಿರಾರು ವರ್ಷಗಳ ಮೊದಲೇ ಈ ನೆಲದಲ್ಲಿ ಉತ್ತುವ, ಬಿತ್ತುವ, ಬೆಳೆಯುವ ವ್ಯವಸಾಯ ಜ್ಞಾನ, ನಿಸರ್ಗದ ಬದಲಾವಣೆ ಗ್ರಹಿಸಿ ಮಳೆ, ಗಾಳಿ, ಚಳಿಯ ಬಗ್ಗೆ ಗ್ರಹಿಸುವ ಹವಾಮಾನ ಜ್ಞಾನ, ಅಕ್ಕಿಯಿಂದ ಅನ್ನ, ಹಾಲಿನಿಂದ ಮೊಸರು ಬೆಣ್ಣೆ ಮಾಡಿಕೊಳ್ಳುವ ಸಂಸ್ಕಾರಜ್ಞಾನ ಇವೆಲ್ಲವನ್ನೂ ನಿಸರ್ಗ ಮುಖಿ ಜೀವನಕ್ರಮದಿಂದ ಪಡೆದುಕೊಂಡು ತಾವೂ ಬದುಕಿ ಇತರರ ಬದುಕಿಗೂ ನೆರವಾಗಿ ನಿಲ್ಲುವ ನಮ್ಮ ಹಿರಿಯ ಪರಂಪರೆಯ ಪರಮೋಚ್ಚ ಅರಿವು ಇಂದಿನ ಆಧುನಿಕ ಶಿಕ್ಷಣ ಮಾರ್ಗಕ್ಕೆ ಪ್ರೇರಣೆಯ ದಾರಿ ಆಗಲಿ ಎಂದು ಆಶಿಸಿದರು.
ಶಾಸಕ ಎಚ್. ಡಿ. ತಮ್ಮಯ್ಯ ಮಾತನಾಡಿ, ನಮ್ಮ ಹೆಮ್ಮೆಯ ಸಂಸ್ಕೃತಿಯ ವಿಚಾರಧಾರೆಯನ್ನು ಹೊತ್ತು ಸಾಗುತ್ತಿರುವ ಈ ಶ್ರಾವಣ ಸಂಜೆ ಜ್ಞಾನಯಾನ ಯಶಸ್ವಿ ಆಗಿ ಮುನ್ನಡೆಯಲಿ ಎಂದು ಶುಭ ಕೋರಿದರು.
ಲಯನ್ಸ್ ಅಧ್ಯಕ್ಷ ನಾರಾಯಣ ಸ್ವಾಮಿ, ಐಸಿರಿ ಫೌಂಡೇಶನ್ ಅಧ್ಯಕ್ಷ ರೋಹನ್, ಗೀತ ಗಾಯನದ ಚಂದನ್, ಪ್ರಮುಖರಾದ
ಲಯನ್ಸ್ ಬಳಗದ ವೈದ್ಯ, ಜಗದೀಶ್, ರಮೇಶ್, ಕುಮಾರ್, ವೇಲು, ಉದ್ಯಮಿಗಳಾದ ನರೇಂದ್ರ, ಭೂಷಣ್ , ಲಯನ್ ಗೋಪಿಕೃಷ್ಣ ಉಪಸ್ಥಿತರಿದ್ದರು.