ಫಲಾನುಭವಿಗಳು ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗದಿರಲಿ

ಮೂಡಿಗೆರೆಯಲ್ಲಿ ನಡೆದ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆ ನಡೆಯಿತು. ಇಒ ದಯಾವತಿ, ಹೊಸಕೆರೆ ರಮೇಶ್, ಅರುಣ, ನಾರಾಯಣ, ಗುರುವಪ್ಪ,  ಶ್ರೀನಿವಾಸ್, ನವೀನ್, ದೀಕ್ಷಿತ್ ಇದ್ದರು.
ಮೂಡಿಗೆರೆಯಲ್ಲಿ ನಡೆದ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆ ನಡೆಯಿತು. ಇಒ ದಯಾವತಿ, ಹೊಸಕೆರೆ ರಮೇಶ್, ಅರುಣ, ನಾರಾಯಣ, ಗುರುವಪ್ಪ, ಶ್ರೀನಿವಾಸ್, ನವೀನ್, ದೀಕ್ಷಿತ್ ಇದ್ದರು.
Published on: 

ಮೂಡಿಗೆರೆ: ಗೃಹಜೋತಿ, ಗೃಹಲಕ್ಷ್ಮಿ ಮತ್ತು ಯುವನಿಧಿ ಯೋಜನೆಯಡಿ ಅರ್ಹ ಫಲಾನುಭವಿಗಳು ಸರ್ಕಾರದ ಸವಲತ್ತುಗಳಿಂದ ಹೊರಗುಳಿಯದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿದರೆ ಮಾತ್ರ ಯೋಜನೆಗೆ ಯಶಸ್ಸು ಸಿಗುತ್ತದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸಿ.ಬಿ.ಶಂಕರ್ ಅಧಿಕಾರಿಗಳಿಗೆ ಸೂಚಿಸಿದರು.

ತಾಪಂನಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿ, ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆಗೆ ಅ.31ಕಡೆ ದಿನ. ಇದರಲ್ಲಿ ಶೇ.100 ಪ್ರಗತಿ ಸಾಧಿಸಬೇಕು ಎಂದು ಹಿಂದಿನ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಗೃಹಲಕ್ಷ್ಮಿ, ಯುವನಿಧಿ ಸೇರಿದಂತೆ ಎಲ್ಲ ಯೋಜನೆಗಳಲ್ಲೂ ಅಧಿಕಾರಿಗಳು ಪ್ರಗತಿ ಸಾಧಿಸಬೇಕು ಎಂದರು.

ಮೆಸ್ಕಾಂ ಅಧಿಕಾರಿ ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ 26.052 ಗೃಹ ಜ್ಯೋತಿ ಫಲಾನುಭವಿಗಳಿದ್ದಾರೆ. ಇವರು ಬಳಸಿದ ವಿದ್ಯುತ್‌ನ ಮೊತ್ತ 96.68 ಲಕ್ಷ ರೂ.ಸರ್ಕಾರದಿಂದ ಬಿಡುಗಡೆಯಾಗಿದೆ. ಸರ್ಕಾರದ ಆದೇಶದಂತೆ 128 ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ನೀಡಲಾಗಿದೆ. ಅದರ ಮೊತ್ತ 44,530 ರೂ. ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಇಂಪನಾ ಮಾತನಾಡಿ, ತಾಲೂಕಿನಲ್ಲಿ 29.191 ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ. ಇದರಲ್ಲಿ 26.749 ಅರ್ಹ ಫಲಾನುಭವಿಗಳು, ಅವರಿಗೆ ಮಾಸಿಕ 2 ಸಾವಿರ ನೀಡಲು 5.35 ಕೋಟಿ ರೂ. ಬಿಡುಗಡೆಯಾಗಿದ್ದು, ಫಲಾನುಭವಿಗಳ ಖಾತೆಗೆ ಈಗಾಗಲೆ ಜಮಾ ಮಾಡಲಾಗಿದೆ. ಎನ್‌ಸಿಪಿಐ 114, ತೆರಿಗೆ ಪಾವತಿದಾರರು 557, ಹೊಸ ಫಲಾನುಭವಿಗಳು 1221, ಈಕೆವೈಸಿ ಆಗದ 141 ಫಲಾನುಭವಿಗಳು ಯೋಜನೆಯಿಂದ ಹೊರಗುಳಿದಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆಗೆ 199 ಮಂದಿ ಅಂಗನವಾಡಿ ಶಿಕ್ಷಕಿಯರನ್ನು ನೇಮಿಸಲಾಗಿದೆ. ಈವರೆಗೆ ಫಲಾನುಭವಿಗಳಿಗೆ 32 ಕಂತು ಹಣ ಪಾವತಿಯಾಗಿದೆ ಎಂದು ಮಾಹಿತಿ ನೀಡಿದರು.

ಆಹಾರ ಇಲಾಖೆ ಅಧಿಕಾರಿ ಇಂದ್ರೇಶ್ ಮಾತನಾಡಿ, ತಾಲೂಕಿನಲ್ಲಿ 18.269 ಮಂದಿ ಬಿಪಿಎಲ್ ಪಡಿತರ ಚೀಟಿಗೆ 2,926 ಕ್ವಿಂಟಲ್ ಅಕ್ಕಿ ವಿತರಣೆ ಮಾಡಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಪ್ರತಿ ಫಲಾನುಭವಿಗೆ 7 ಕೆಜಿ ಅಕ್ಕಿ, 3 ಕೆಜಿ ರಾಗಿ ವಿತರಿಸಲಾಗಿದೆ. ಎಂದು ತಿಳಿಸಿದರು.

ಜಿಲ್ಲಾ ಉದ್ಯೋಗ ನೊಂದಾವಣಾಧಿಕಾರಿ ಜಯಶ್ರೀ ಮಾತನಾಡಿ, ಯುವನಿಧಿಗೆ 542 ವಿದ್ಯಾರ್ಥಿಗಳು ಈ ಬಾರಿ ಹೊಸದಾಗಿ ನೋಂದಣೆ ಮಾಡಿಕೊಂಡಿದ್ದಾರೆ. ಯೋಜನೆ ಆರಂಭದಿಂದ ಇದುವರೆಗೂ ಪದವಿ ವಿಭಾಗದಲ್ಲಿ 4,958, ಡಿಪ್ಲೊಮಾ ವಿಭಾಗದಲ್ಲಿ 60 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. ಈ ಎಲ್ಲ ಫಲಾನುಭವಿಗಳಿಗೆ ನೀಡಲು 1.50 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ, ಶಕ್ತಿ ಯೋಜನೆಯಡಿ 3.64 ಲಕ್ಷ ಫಲಾನುಭವಿಗಳು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದು, ಸರ್ಕಾರದಿಂದ 1.75 ಕೋಟಿ ರೂ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

ತಾಪಂ ಇಒ ದಯಾವತಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಹೊಸಕೆರೆ ರಮೇಶ್, ಅರುಣ್, ನಾರಾಯಣ, ಗುರುವಪ್ಪ, ಶ್ರೀನಿವಾಸ್, ನವೀನ್, ದೀಕ್ಷಿತ್ ಇತರರಿದ್ದರು.