ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಿ

 ಯಗಟಿ ಪ್ರಭಾರ ಸಹಾಯಕ ಇಂಜಿನಿಯರ್ ರಮೇಶ್‌ಗೆ ಸಿಂಗಟಗೆರೆ ರೈತರು ಮನವಿ ಸಲ್ಲಿಸಿದರು.
ಯಗಟಿ ಪ್ರಭಾರ ಸಹಾಯಕ ಇಂಜಿನಿಯರ್ ರಮೇಶ್‌ಗೆ ಸಿಂಗಟಗೆರೆ ರೈತರು ಮನವಿ ಸಲ್ಲಿಸಿದರು.
Published on

ಪಂಚನಹಳ್ಳಿ: ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಸಿಂಗಟಗೆರೆ ರೈತರು ಆಗ್ರಹಿಸಿದರು.

ಸಿಂಗಟಗೆರೆ ಮೆಸ್ಕಾಂ ಉಪಕಚೇರಿ ಬಳಿ ಮೆಸ್ಕಾಂ ವಿರುದ್ಧ ಮೂರ್ನಾಲ್ಕು ಗ್ರಾಮಗಳ ರೈತರು ಪ್ರತಿಭಟನೆ ನಡೆಸಿ ಮಾತನಾಡಿ, ಕುಂದೂರು, ಎಸ್.ಮಾದಾಪುರ ಭಾಗದ ರೈತರು ಜಮೀನುಗಳ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ 6 ಗಂಟೆ ವಿದ್ಯುತ್ ಪೂರೈಸುತ್ತಿಲ್ಲ. ರೈತರು ಅನೇಕ ಬಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಮಳೆ ಇಲ್ಲದೆ ತೆಂಗು, ಅಡಿಕೆ ಮತ್ತು ಹಸಿ ಮೇವು ಒಣಗುತ್ತಿವೆ. ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುತ್ತಿದೆ. ದಿನದಲ್ಲಿ ಎರಡ್ಮೂರು ಗಂಟೆ ಮಾತ್ರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಆದರೂ ಪದೇಪದೆ ವಿದ್ಯುತ್ ಕಡಿತವಾಗುತ್ತಿರುವುದರಿಂದ ಕೃಷಿ ಪಂಪ್‌ಸೆಟ್‌ಗಳು ಸುಟ್ಟುಹೋಗುತ್ತಿವೆ. ಹಗಲು-ರಾತ್ರಿ ಎನ್ನದೆ ತೋಟಗಳಿಗೆ ರೈತರು ಅಲೆಯುವ ಪರಿಸ್ಥಿತಿ ಎದುರಾಗಿದೆ. ಮೆಸ್ಕಾಂ ಕಚೇರಿಗೆ ದೂರವಾಣಿ ಕರೆ ಮಾಡಿದರೆ ಉಡಾಫೆ ಉತ್ತರ ನೀಡುತ್ತಾರೆ. ವಿದ್ಯುತ್ ಸಮಸ್ಯೆಯನ್ನು ಕೂಡಲೇ ಬಗೆಹರಿಸಿಕೊಡುವಂತೆ ರೈತರು ಪಟ್ಟು ಹಿಡಿದರು.

ಯಗಟಿ ಪ್ರಭಾರ ಸಹಾಯಕ ಇಂಜಿನಿಯರ್ ರಮೇಶ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಇಲ್ಲಿನ ಉಪಕೇಂದ್ರದ ಎಫ್-6 ಫೀಡರ್‌ಗೆ ಒಳಪಡುವ ಗ್ರಾಮಗಳಾದ ಕುಂದೂರು, ದೇವರಹಳ್ಳಿ, ನಾರಣಪುರ, ಸಿದ್ದರಾಮನಹಳ್ಳಿ, ಎಸ್.ಮಾದಾಪುರ, ರಂಗಾಪುರ ಭಾಗದ ಮೇಲಾಧಿಕಾರಿಗಳ ಜತೆ ಮಾತನಾಡಿ ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಿ ಪ್ರತಿದಿನ 6 ಗಂಟೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದಾಗ ರೈತರು ಪ್ರತಿಭಟನೆ ಹಿಂಪಡೆದರು.

ಗ್ರಾಮಸ್ಥರಾದ ಉಮೇಶ್, ಚಿಕ್ಕೇಗೌಡ, ಲೋಹಿತ್‌ಕುಮಾರ್, ಕೆ.ಯು.ಪ್ರಕಾಶ್, ನೀಲಕಂಠಪ್ಪ, ಕೆ.ಬಿ.ಯೋಗೀಶ್, ಹಾಲಪ್ಪ, ಶಿವಮೂರ್ತಿ, ಮರಳಪ್ಪ, ಜಿ.ಡಿ.ಲೋಹಿತ್, ಶಿವಪ್ಪ, ಯೋಗೇಶ್, ಕಲ್ಲೇಶ್, ತೀರ್ಥಕುಮಾರ್, ಸಂತೋಷ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net