ಹುಟ್ಟು ಸಾವಿನ ನಡುವಿನ ಜೀವನ ಸಮೃದ್ಧ ಗೊಳಿಸಿಕೊಳ್ಳಿ

 ಮುಂಡ್ರೆ ಗ್ರಾಮದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ರಂಭಾಪುರಿ ಶ್ರೀ ಆಶೀರ್ವಚನ ನೀಡಿದರು. ಸಿ.ಟಿ.ರವಿ ಇದ್ದರು
ಮುಂಡ್ರೆ ಗ್ರಾಮದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ರಂಭಾಪುರಿ ಶ್ರೀ ಆಶೀರ್ವಚನ ನೀಡಿದರು. ಸಿ.ಟಿ.ರವಿ ಇದ್ದರು
Published on
ಬೀರೂರು: ಪರಮಾತ್ಮನಿಂದ ಭಿನ್ನವಾಗಿ ಬಂದ ಜೀವಾತ್ಮವು ಮತ್ತೆ ಅವನಲ್ಲಿ ಲೀನವಾಗುವ ಪ್ರಕ್ರಿಯೆ ಸಹಜವಾಗಿದೆ. ಪಂಚಭೂತ ಮತ್ತು ಪಂಚತತ್ವಗಳು ಒಳಗೊಳ್ಳದೆ ಮನುಷ್ಯನಿರಲು ಸಾಧ್ಯವಿಲ್ಲ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಮುಂಡ್ರೆ ಗ್ರಾಮದಲ್ಲಿ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಾನವನು ತಾನೊಂದು ಬಗೆದರೆ ವಿಧಿ ಇನ್ನೊಂದು ಎಣಿಸಿರುತ್ತದೆ ಎನ್ನುವ ಎಚ್ಚರದಲ್ಲಿ ನಾವು ನಮಗೆ ಎದುರಾಗುವ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸಿ ಗುರಿ ಮುಟ್ಟಬೇಕು. ಹುಟ್ಟು ಸಾವಿನ ನಡುವಿನ ಪುಟಗಳನ್ನು ಸಮೃದ್ಧ ಗೊಳಿಸಿಕೊಳ್ಳಬೇಕು ಎಂದರು.
ಭಗವಂತನು ಹುಟ್ಟು-ಸಾವಿನ ಪುಟಗಳನ್ನು ಬರೆದು ನಮ್ಮನ್ನು ಕಳುಹಿಸುತ್ತಾನೆ. ದೇಹವನ್ನು ದುಡಿಮೆಗೆ ಮತ್ತು ಮನಸ್ಸನ್ನು ಭಗವಂತನಿಗೆ ಅರ್ಪಿಸಿದರೆ ಜೀವನ ಕ್ರಿಯಾಶೀಲವಾಗುತ್ತದೆ. ಬದುಕಿನಲ್ಲಿ ಪಾರಮಾರ್ಥಿಕ ದೃಷ್ಟಿ ಇದ್ದರೆ ದುಃಖದ ಸೋಂಕು ಇರುವುದಿಲ್ಲ. ಜೀವನ ನಶ್ವರ, ಸಾವು ಅನಿವಾರ್ಯ, ನಡುವೆ ನಾವು ಬದುಕಿಗಾಗಿ ಹೋರಾಟ ನಡೆಸುತ್ತಿದ್ದು, ಈ ತತ್ವಗಳ ಆಧಾರದಲ್ಲಿ ವೀರಶೈವ ಧರ್ಮವು ಮರಣವೇ ಮಹಾನವಮಿ ಎಂದು ಅರ್ಥೈಸಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮ ಸಂಸ್ಕೃತಿ ಹೆಚ್ಚಾಗುತ್ತಿದ್ದು, ನಮ್ಮ ನಾಡಿನ ಸಂಸ್ಕೃತಿ ಮರೆಯುತ್ತಿದೆಯೇ ಎನ್ನುವ ಶಂಕೆ ಮೂಡುತ್ತಿದೆ. ಇದ್ದಾಗ ತಂದೆ-ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳದೆ ನಂತರ ಅತ್ತರೆ ಏನೂ ಪ್ರಯೋಜನವಿಲ್ಲ. ಹಾಗಾಗಿಯೇ ದಾಸರು ಮಾನವ ಜನ್ಮ ದೊಡ್ಡದು. ಇದನ್ನು ಹಾಳು ಮಾಡಬೇಡಿ ಎಂದು ಎಚ್ಚರಿಸಿದ್ದಾರೆ ಎಂದರು.
ಹಣ್ಣೆ ಮಠದ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್, ಎಚ್.ಎಂ.ಲೋಕೇಶ್, ಸವಿತಾ ರಮೇಶ್, ಹುಲಿಕೆರೆ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ತರೀಕೆರೆ ಜಗದೀಶ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶಂಕರದ ದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೇರುಗಂಡಿ ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ನಂದೀಪುರ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಕಾರ್ಯದರ್ಶಿ ರೇಣುಕಪ್ರಸಾದ್, ಎಂ.ಬಿ.ಗಿರಿರಾಜ್, ಬಿ.ಎನ್.ಧೃವಕುಮಾರ್, ಕಡೂರು ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎಸ್.ಪಿ.ರೇಣುಕಾರಾಧ್ಯ, ಟಿ.ವಿ.ಶಿವಶಂಕರಪ್ಪ, ಪೂರ್ಣೇಶ್, ಗಂಗಾಧರಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net