ಬಾಳೆಹೊನ್ನೂರಿನ ಮಲೆನಾಡು ಒಳ್ಳೆಯ ಮನಸ್ಸುಗಳ ಒಕ್ಕೂಟದಿಂದ ರಾಷ್ಟ್ರೀಯ ಕಾಗದದ ದಿನ ಆಚರಿಸಲಾಯಿತು. ಮಂಜಪ್ಪ, ಚೈತನ್ಯ ವೆಂಕಿ, ಎನ್.ಶಶಿಧರ್, ಸನತ್ ಶೆಟ್ಟಿ, ಸಿ.ಪಿ.ರಮೇಶ್, ಎಚ್.ಗೋಪಾಲ್ ಇತರರಿದ್ದರು.
ಬಾಳೆಹೊನ್ನೂರು: ಪರಿಸರ ಸಂರಕ್ಷಣೆ ಕಾಳಜಿಯಿಂದ ಪ್ರತಿಯೊಬ್ಬರೂ ಕಾಗದದ ಬಳಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ಮಾಗುಂಡಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಮಂಜಪ್ಪ ಹೇಳಿದರು.
ಪಟ್ಟಣದ ಮಲೆನಾಡು ಒಳ್ಳೆಯ ಮನಸ್ಸುಗಳ ಒಕ್ಕೂಟ ಆಯೋಜಿಸಿದ್ದ ರಾಷ್ಟ್ರೀಯ ಕಾಗದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ವರ್ಷ ಆ.1ರಂದು ಕಾಗದ ದಿನ ಆಚರಿಸಲಾಗುತ್ತಿದ್ದು, ಭಾರತದ ಕಾಗದ ತಯಾರಿಕಾ ಉದ್ಯಮದ ಪ್ರಗತಿಯನ್ನು ಗುರುತಿಸುವುದು, ಕಾಗದವನ್ನು ಮಿತವಾಗಿ ಬಳಸುವುದು ಮತ್ತು ಮರುಬಳಕೆ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಮಹತ್ವವಾಗಿದೆ ಎಂದರು.
ಭಾರತವು ಶತಮಾನಗಳಷ್ಟು ಹಳೆಯದಾದ ಕಾಗದ ತಯಾರಿಕೆಯ ಶ್ರೀಮಂತ ಸಂಪ್ರದಾಯ ಹೊಂದಿದೆ. ಈ ಉದ್ಯಮವು ಕಾಗದ ಉದ್ಯಮದ ತಳಮಟ್ಟದಿಂದ ಮರುಬಳಕೆಯವರೆಗೆ ಸುಸ್ಥಿರ ಅಭ್ಯಾಸಗಳಲ್ಲಿ ಪ್ರಯತ್ನಗಳನ್ನು ಎತ್ತಿ ತೋರಿಸುತ್ತದೆ ಎಂದರು.
ಕಾಗದದ ದಿನಾಚರಣೆಯಿಂದ ಈ ಉದ್ಯಮದಲ್ಲಿ ನಾವೀನ್ಯತೆ ಮತ್ತು ಹೊಸ ಸಂಶೋಧನೆಗಳನ್ನು ಬೆಳೆಸುತ್ತದೆ. ಇದು ಹೊಸ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳ ಅಭಿವೃದ್ಧಿಗೆ ಕಾರಣವಾಗಿದೆ ಎಂದರು.
ಕಾಗದದ ದಿನ ಆಚರಣೆಗೆ ಸೀಮಿತಗೊಳಿಸದೆ ಕಾಗದದ ಪ್ರಪಂಚದ ಬಗ್ಗೆ ಅನ್ವೇಷಣೆಗಳನ್ನು ನಡೆಸಲು ಯುವಜನರನ್ನು ಪ್ರೋತ್ಸಾಹಿಸಬೇಕಿದೆ ಎಂದು ಕಾರ್ಯಕ್ರಮ ಸಂಯೋಜಕ ಚೈತನ್ಯ ವೆಂಕಿ ಹೇಳಿದರು. ವಿಶ್ವದಲ್ಲಿ ಕಾಗದದ ಬಳಕೆಗೆ ಪುರಾತನ ಇತಿಹಾಸ ಇದೆ. ಈ ದಿನಾಚರಣೆಯಂದು ಕಾಗದದ ಉಪಯೋಗ ಕುರಿತು ವಿದ್ಯಾರ್ಥಿಗಳು, ಯುವಜನರಿಗೆ ವಿಚಾರ ಸಂಕಿರಣ, ಕಾರ್ಯಾಗಾರಗಳ ಮೂಲಕ ತಿಳಿಸಬೇಕಿದೆ ಎಂದರು.
ಜೆಸಿಐ ಮಾಜಿ ಅಧ್ಯಕ್ಷ ಎನ್.ಶಶಿಧರ್, ಜೆಸಿಐ ಅಧ್ಯಕ್ಷ ಸನತ್ ಶೆಟ್ಟಿ, ರೋಟರಿ ವಲಯಾಧಿಕಾರಿ ಸಿ.ಪಿ.ರಮೇಶ್, ಎಚ್.ಗೋಪಾಲ್, ಇಬ್ರಾಹಿಂ ಶಾಫಿ, ಬಿ.ಎಚ್.ಮನುಕುಮಾರ್, ಕೆ.ಆರ್.ಭೂದೇಶ್, ಒ.ಡಿ.ಸ್ಟೀಫನ್, ಸೋಮೇಶ್ ಗೌಡ, ಕೆ.ಎಂ.ರಾಘವೇಂದ್ರ, ವಿ.ಅಶೋಕ ಮತ್ತಿತರರಿದ್ದರು.