

ಪ್ರಮುಖ ಮುಖ್ಯಾಂಶಗಳು
ಮಹಮ್ಮದ್ ಪೈಗಂಬರ್ ಅವರ ೧೫೦೦ನೇ ಜನ್ಮದಿನದ ಅಂಗವಾಗಿ ಸಹಸ್ರಾರು ಮಂದಿ ಮುಸ್ಲಿಂ ಸಮುದಾಯದವರು ಬುಧವಾರ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿದರು.
ನಗರದ ವಿವಿಧ ಬಡಾವಣೆಗಳಲ್ಲಿ ವಾಸಿಸುತ್ತಿರುವ ಮುಸ್ಲಿಂ ಸಮುದಾಯದವರು ಅಂಡೇಛತ್ರಕ್ಕೆ ಬಂದು ಸೇರಿದರು. ಅಲ್ಲಿಂದ ಮೆರವಣಿಗೆ ಹೊರಟು ಮಹಾತ್ಮಗಾಂಧಿ ರಸ್ತೆಯಲ್ಲಿ ಸಾಗಿ, ಪ್ರಧಾನ ಅಂಚೆ ಕಚೇರಿ ರಸ್ತೆಯ ಮೂಲಕ ತೆರಳಿ ಐಜಿ ರಸ್ತೆಗೆ ಬಂದು ಅಲ್ಲಿಂದ ಹನುಮಂತಪ್ಪ ವೃತ್ತ ಬಳಸಿ ಮತ್ತೆ ಅಂಡೇ ಛತ್ರದಲ್ಲಿ ಮೆರವಣಿಗೆಯನ್ನು ಅಂತ್ಯಗೊಳಿಸಿದರು.
ಈದ್‌ಮಿಲಾದ್ ಅಂಗವಾಗಿ ನಗರದ ಪ್ರಮುಖವೃತ್ತ ಮತ್ತು ಕೆಲವು ಬಡಾವಣೆಗಳನ್ನು ಹಸಿರು ಬಣ್ಣಗಳಿಂದ ಅಲಂಕರಿಸಲಾಗಿತ್ತು. ಮೆರವಣಿಗೆ ಮೊದಲು ಯುವಕರು ಬಿದಿರಿನಕೋಲು ಮತ್ತು ಪೈಪ್‌ಗಳಿಗೆ ಹಸಿರುಬಾವುಟಗಳನ್ನು ಕಟ್ಟಿಕೊಂಡು ಬೈಕ್‌ನಲ್ಲಿ ಸುತ್ತುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.ಸ್ನೇಹಿತರು, ಆತ್ಮೀಯರು, ಸಂಬಂಧಿಗಳು ಒಬ್ಬರನ್ನೊಬ್ಬರು ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.
ಅಂಡೇಛತ್ರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮೆರವಣಿಗೆ ಹೊರಡು ಸ್ಥಳದ ಮುಂಭಾಗದಲ್ಲಿ ಸ್ವಾಗತ ಕಮಾನುಗಳನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಮೆರವಣಿಗೆ ಸಾಗುವ ರಸ್ತೆಯಲ್ಲಿ ಹಸಿರು ಬಾವುಟಗಳನ್ನು ಕಟ್ಟಲಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರು ಪ್ರವಾದಿ ಮಹ್ಮದ್ ಅವರ ಪರವಾಗಿ ಜಯಕಾರ ಕೂಗಿದರು.
ಮೆರವಣಿಗೆಯಲ್ಲಿ ಹಸಿರು ಬಾವುಟಗಳು ಹಾರಾಡಿದವು.ಯುವಕರು ರಸ್ತೆಯ ಮಧ್ಯಭಾಗದಲ್ಲಿ ನಿಂತು ಕೋಲಿಗೆ ಸಿಕ್ಕಿಸಿದ್ದ ಬಾವುಟಗಳನ್ನು ತಿರುಗಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೊಸ ಬಟ್ಟೆಗಳನ್ನು ಧರಿಸಿದ್ದ ಸಾವಿರಾರು ಮಂದಿ ಪುರುಷರು ಬಾಲಕರು ಮೆರವಣಿಗೆಯಲ್ಲಿ ಹೆಜ್ಜೆಹಾಕಿದರು. ಕೆಲವರು ಈದ್‌ಮಿಲಾದ್ ಅಂಗವಾಗಿ ಮೆರವಣಿಗೆ ಸಾಗುವಾಗ ಹಾಡುಗಳನ್ನು ಹಾಡುತ್ತಿದ್ದ ದೃಶ್ಯ ಕಂಡುಬಂತು.
ಡಿಜೆಗೆ ಅನುಮತಿ ಇಲ್ಲದಿರುವುದರಿಂದ ಯುವಕರು ಕುಣಿದುಕುಪ್ಪಳಿಸಲು ಸಾಧ್ಯವಾಗಲಿಲ್ಲ. ಒಟ್ಟಾರೆಯಾಗಿ ಮಹ್ಮದ್ ಪೈಗಂಬರ್ ೧೫೦೦ನೇ ಜನ್ಮದಿನದ ಅಂಗವಾಗಿ ನಗರದಲ್ಲಿ ನಡೆದ ಬೃಹತ್ ಮೆರವಣಿಗೆ ಶಾಂತಿಯುತವಾಗಿ ಮುಕ್ತಾಯಗೊಂಡಿತು.