ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಖರಾಯಪಟ್ಟಣ ಸಮೀಪದ ಹಸ್ತಿನಾಪುರ (ಹಳೆಹಟ್ಟಿ ತಾಂಡ್ಯ) ದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿದರು.
ಚಿಕ್ಕಮಗಳೂರು: ಬದುಕಿಗೆ ವಿದ್ಯೆ ಬಹು ಮುಖ್ಯ. ಒಳ್ಳೆಯ ಶಾಲೆಗಳು ತೆರೆಯಬೇಕು. ಉತ್ತಮ ಶಿಕ್ಷಕರನ್ನು ನೇಮಕ ಮಾಡಬೇಕು. ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯ ನೀಡಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಖರಾಯಪಟ್ಟಣ ಸಮೀಪದ ಹಸ್ತಿನಾಪುರ (ಹಳೆಹಟ್ಟಿ ತಾಂಡ್ಯ) ದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತ ದೇಶದಲ್ಲಿ ಹುಟ್ಟಿರುವ ನಾವು ಒಳ್ಳೆಯ ಸಂಸ್ಕಾರವAತರಾಗಿ ಮಕ್ಕಳಿಗೂ ಕೂಡ ಉತ್ತಮ ಸಂಸ್ಕಾರವನ್ನು ಕಲಿಸಬೇಕು ಎಂದ ಅವರು, ಒಳ್ಳೆಯ ಪ್ರಜೆಗಳು ಆಗಬೇಕಾದರೆ ಶಿಕ್ಷಣ ಅತಿ ಮುಖ್ಯ ಎಂದರು.
ಪ್ರಪಂಚವೇ ಮೆಚ್ಚುವಂತಹ ಸಂವಿಧಾನವನ್ನು ನೀಡಿರುವಂತಹ ಡಾ.ಬಿ.ಆರ್. ಅಂಬೇಡ್ಕರ್ ಅವರು, ಶಿಕ್ಷಣ ಎಂದರೆ ಹುಲಿಯ ಹಾಲಿದ್ದಂತೆ. ಆ ಹಾಲನ್ನು ಕುಡಿದವರು ಹೊರಗೆ ಘರ್ಜಿಸುತ್ತಾರೆ. ಹಾಗಾಗಿ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು ಎಂದು ಹೇಳಿದ್ದರು ಎಂದರು.
ಶಾಲೆಗಳನ್ನು ಮುಚ್ಚಬಾರದು ಅವುಗಳನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕೆಂಬ ಉದ್ದೇಶದಿಂದ ನಮ್ಮ ಸರ್ಕಾರ ಶಾಲೆಗಳಿಗೆ ಮೂಲಭೂತ ಸೌಲಭ್ಯ ಹಾಗೂ ಉತ್ತಮ ಶಿಕ್ಷಕರನ್ನು ನೇಮಕ ಮಾಡಿದೆ. ಹಾಗಾಗಿ ಬಡವರು ಹಾಗೂ ಮಧ್ಯಮ ವರ್ಗದವರು ಖಾಸಗಿ ಶಾಲೆಗಳಿಗೆ ಹೋಗದೆ ಸರ್ಕಾರಿ ಶಾಲೆಯಲ್ಲಿ ಓದಿಸುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ೫೦೦ ಕೆ.ಪಿ.ಎಸ್. ಶಾಲೆಗಳನ್ನು ನಮ್ಮ ಸರ್ಕಾರ ಮಂಜೂರು ಅದರಲ್ಲಿ ೩ ಶಾಲೆಗಳನ್ನು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ನೀಡಲಾಗಿದೆ. ಎರಡು ಶಾಲೆಗಳನ್ನು ನಗರಕ್ಕೆ ಕೊಡಲಾಗಿದೆ. ಇನ್ನೊಂದು ಶಾಲೆ ಸಖರಾಪಟ್ಟಣಕ್ಕೆ ನೀಡಲಾಗಿದೆ. ಒಂದರಿAದ ಹನ್ನೇರಡನೆ ತರಗತಿಯವರೆಗೆ ಅತ್ಯುತ್ತಮ ಶಿಕ್ಷಣದ ಜತೆಗೆ ಮೂಲಭೂತ ಸೌಲಭ್ಯ ನೀಡಲಾಗುವುದು ಎಂದರು.
ದೇವರಾಜ್ ಅರಸ್ ಅವರು ಉಳುವವನೇ ಭೂ ಒಡೆಯ ಎಂದು ಘೋಷಣೆ ಮಾಡಿ ಭೂಮಿಯನ್ನು ಕೊಟ್ಟಿದ್ದರು. ಆನಂತರ ಸುಮಾರು ೪೦ ವರ್ಷ ಆದರೂ ಯಾರು ಹಳ್ಳಿಗಳಲ್ಲಿ ತಾಂಡಗಳಲ್ಲಿ ವಾಸವಾಗಿದ್ದಾರೋ ಅವರಿಗೆ ಇ- ಖಾತೆ ಹಕ್ಕು ಪತ್ರ ಇರಲಿಲ್ಲ. ನಮ್ಮ ಸರ್ಕಾರ ೩೦ ವರ್ಷಗಳಿಂದ ವಾಸ ವಾಗಿದ್ದಾರೋ ಅವರಿಗೆ ಹಕ್ಕು ಪತ್ರ ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಈಗಾಗಲೇ ಟಿ.ಬಿ. ಕಾವಲ್, ಬಿದರಳ್ಳಿ ತಾಂಡ್ಯಗಳಿಗೆ ಹಕ್ಕು ಪತ್ರಗಳನ್ನು ಅವರ ಮನೆಗಳಿಗೆ ತಲುಪಿಸಿದ್ದೇವೆ. ಅದೇ ರೀತಿ ಹಸ್ತಿನಾಪುರ ತಾಂಡ್ಯದ ಮನೆ ಮನೆಗೆ ಹಕ್ಕುಪತ್ರಗಳನ್ನು ತಲುಪಿಸುತ್ತೇವೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಪ್ರಾಥಮಿಕ ಶಿಕ್ಷಣ ನಮ್ಮ ಭವಿಷ್ಯ ನಿರ್ಮಾಣ ಮಾಡಲಿದೆ. ಹಾಗಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇದು, ಅನಿವಾರ್ಯವೂ ಕೂಡ ಆಗಿದೆ ಎಂದು ಹೇಳಿದರು.
ಹಿಂದೆ ಕಲಿಕೆಗೆ ಅವಕಾಶ ಇರಲಿಲ್ಲ. ವಿದ್ಯೆಯಿಂದ ಯಾರೂ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ನಮ್ಮ ಸಂವಿಧಾನದ ಆಶಯ. ಸ್ವಾಥ್ಯ ಸಮಾಜ ಉಳಿಯಬೇಕಾದರೆ ಶಿಕ್ಷಣದ ಅಗತ್ಯವಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ನಮ್ಮೂರ ಶಾಲೆ ನಮ್ಮ ಹೆಮ್ಮೆ. ಶಾಲೆಗಳನ್ನು ಮುಚ್ಚಲು ಬಿಡಬಾರದು. ಆಂಗ್ಲ ಶಾಲೆಯ ವ್ಯಾಮೋಹದ ಮಾನಸಿಕ ಗುಲಾಮಗಿರಿಯಿಂದ ಹೊರಗೆ ಬರಬೇಕು. ಬದುಕನ್ನು ಬದಲಾಯಿಸುವ ಶಕ್ತಿ ಶಿಕ್ಷಣಕ್ಕೆ ಇದೆ. ಕಾನ್ವೆಂಟ್ ವ್ಯಾಮೋಹ ಬದಲಾಗಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಡೂರು ತಾಪಂ ಮಾಜಿ ಸದಸ್ಯ ಆನಂದ ನಾಯ್ಕ, ಪ್ರಮುಖರಾದ ಮಹಡಿಮನೆ ಸತೀಶ್, ಹೇಮಾಜಿ ನಾಯ್ಕ, ಫೈರೋಜ್ ಖಾನ್, ಶಕುಂತಲಾ ಬಾಯಿ ಉಪಸ್ಥಿತರಿದ್ದರು.