ಕುಡಿಯುವ ನೀರು ಚರಂಡಿಪಾಲು

ಬೀರೂರು ಮಾರ್ಗದಕ್ಯಾಂಪ್‌ನ ಹಳೇ ಲಿಂಗದಹಳ್ಳಿ ರಸ್ತೆಯ ರೈಲ್ವೆ ಟ್ರ್ಯಾಕ್ ಬಳಿ ಕುಡಿಯುವ ನೀರು ಚರಂಡಿಯಲ್ಲಿ ಹರಿಯುತ್ತಿರುವುದು.
ಬೀರೂರು ಮಾರ್ಗದಕ್ಯಾಂಪ್‌ನ ಹಳೇ ಲಿಂಗದಹಳ್ಳಿ ರಸ್ತೆಯ ರೈಲ್ವೆ ಟ್ರ್ಯಾಕ್ ಬಳಿ ಕುಡಿಯುವ ನೀರು ಚರಂಡಿಯಲ್ಲಿ ಹರಿಯುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ದುರಸ್ತಿಪಡಿಸದ ಪುರಸಭೆ
  • ಬೀರೂರಿನಲ್ಲಿ ಒಡೆದ ಪೈಪ್‌ಲೈನ್
ಬೀರೂರು: ಪಟ್ಟಣದ ಹಲವೆಡೆ ಕುಡಿಯುವ ನೀರು ಸೋರಿಕೆಯಾಗುತ್ತಿದೆ. ಪರಿಣಾಮ ಸಾರ್ವಜನಿಕರಿಗೆ ಅಗತ್ಯದಷ್ಟು ನೀರು ಪೂರೈಕೆಯಾಗುತ್ತಿಲ್ಲ. ನೀರು ಪೋಲಾಗುತ್ತಿರುವುದನ್ನು ತಡೆಗಟ್ಟಲು ಪುರಸಭೆ ಗಮನಹರಿಸುತ್ತಿಲ್ಲ.
ಪಟ್ಟಣದ ಮಾರ್ಗದಕ್ಯಾಂಪ್ ರೈಲ್ವೆ ಲೈನ್ ಬಳಿಯ ಹಳೇ ಲಿಂಗದಹಳ್ಳಿ ರಸ್ತೆಯಲ್ಲಿ ಒಂದು ವರ್ಷದಿಂದ ಕುಡಿಯುವ ನೀರು ವ್ಯರ್ಥವಾಗುತ್ತಿದ್ದು, ಪುರಸಭೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ಮಾರ್ಗದಕ್ಯಾಂಪ್‌ನ ಓವರ್‌ಹೆಡ್ ಟ್ಯಾಂಕ್ ಶಿಥಿಲಾವಸ್ಥೆಗೆ ತಲುಪಿದ ಕಾರಣ ಎರಡು ವರ್ಷಗಳ ಹಿಂದೆ ಅದನ್ನು ತೆರವುಗೊಳಿಸಲಾಗಿತ್ತು. ಆದ್ದರಿಂದ ಭದ್ರಾ ನೀರು ಮತ್ತು ಕೊಳವೆಬಾವಿ ನೀರನ್ನು ಆ ಭಾಗಕ್ಕೆ ಮೂರು ದಿನಗಳಿಗೊಮ್ಮೆ ಪೂರೈಕೆ ಮಾಡಲಾಗುತ್ತಿದೆ. ಪೈಪ್ ಒಡೆದುಹೋಗಿ ಒಂದು ವರ್ಷದಿಂದ ನೀರು ಚರಂಡಿ ಸೇರುತ್ತಿದೆ ಎಂಬ ದೂರು ಬಂದೊಡನೆ ಅದನ್ನು ಸರಿಪಡಿಸಲು ಕ್ರಿಯಾಯೋಜನೆ ಸಿದ್ಧಪಡಿಸಿ ಗುತ್ತಿಗೆದಾರನನ್ನು ನಿಯೋಜಿಸಲಾಗಿತ್ತು. ಆದರೆ ಕಾಮಗಾರಿ ಪೂರ್ಣಗೊಳಿಸದಿದ್ದರೂ ಬಿಲ್ ಪಡೆದುಕೊಂಡಿದ್ದಾರೆ. ಇದರಿಂದ ಮಾರ್ಗದ ಕ್ಯಾಂಪ್, ಉಪ್ಪಾರಕ್ಯಾಂಪ್, ಹೊಸಳಮ್ಮ ಬಡಾವಣೆ, ಬಳ್ಳಾರಿ ಕ್ಯಾಂಪ್, ಅಶೋಕನಗರ, ಭಾಗವತ್ ನಗರ ಸೇರಿದಂತೆ ಏಳು ವಾರ್ಡ್‌ಗಳಿಗೆ ಕುಡಿಯುವ ನೀರು ಸಮರ್ಪಕವಾಗಿ ತಲುಪುತ್ತಿಲ್ಲ.   ಏಳೂ ವಾರ್ಡ್‌ಗಳು ಎತ್ತರದಲ್ಲಿರುವ ಕಾರಣ ಹೆಚ್ಚು ಒತ್ತಡದಿಂದ ನೀರನ್ನು ಹತ್ತಿಸಬೇಕು. ಈಗ ನೀರಿನ ಒತ್ತಡ ಹೆಚ್ಚಾದಂತೆ ಪೈಪ್ ಒಡೆದು ನೀರು ಚರಂಡಿ ಸೇರುತ್ತಿದೆ. 
ಮಾರ್ಗದಕ್ಯಾಂಪ್ ನಿವಾಸಿ ಷಣ್ಮುಖಪ್ಪ ಮಾತನಾಡಿ, ನೀರು ಅಮೂಲ್ಯ ಸಂಪತ್ತು. ಅದನ್ನು ಮಿತವಾಗಿ ಹಾಗೂ ಪೋಲಾಗದಂತೆ ಬಳಸಿ ಎಂದು ಹೇಳುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಚರಂಡಿ ಸೇರುತ್ತಿರುವ ನೀರಿನ ಕುರಿತು ಗಮನಹರಿಸುತ್ತಿಲ್ಲ. ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. 
ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ಬೀರೂರು ಸುಮಾರು 60 ಕಿಮೀ ದೂರದಲ್ಲಿದೆ. ಅಲ್ಲಿಂದ ಕೋಟ್ಯಾಂತರ ಹಣ ವ್ಯಯಿಸಿ ಬೀರೂರಿಗೆ ನೀರನ್ನು ತಂದು ಇಲ್ಲಿ ಚರಂಡಿಗೆ ಹರಿಸುತ್ತಿದ್ದಾರೆ. ಹಣ, ವಿದ್ಯುತ್, ಮಾನವಶಕ್ತಿ, ಸಮಯ ಎಲ್ಲವೂ ವ್ಯರ್ಥವಾಗುತ್ತಿದೆ. ಸ್ಥಳೀಯ ಆಡಳಿತ ಎಚ್ಚೆತ್ತುಕೊಳ್ಳಬೇಕಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net