ಬೈರಾಪುರ, ಮರಾಠಿಕ್ಯಾಂಪಿನಲ್ಲಿ ಹುಲಿ, ಚಿರತೆ ಸಂಚಾರ ಮಾಡುತ್ತಿರುವುದರಿಂದ ಅಂಗನವಾಡಿ, ಶಾಲಾ ಮಕ್ಕಳು ಶಾಲೆಗೆ ಬರುತ್ತಿಲ್ಲ. ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಗ್ರಾಮಸ್ಥರೊಂದಿಗೆ ಚರ್ಚಿಸಿದ್ದು, ಗ್ರಾಮಸ್ಥರು ವೈಲ್ಡ್ ಲೈಫ್ ಏರಿಯಾದ ದಾರಿಯನ್ನು ಬಿಟ್ಟು, ಪರ್ಯಾಯ ದಾರಿ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ ಎಂದು ಬಿಇಒ ಶಬಾನಾ ಅಂಜುಮ್ ತಿಳಿಸಿದರು. ಭದ್ರಾಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ಮಕ್ಕಳ ರಕ್ಷಣೆ ದೃಷ್ಟಿಯಿಂದ ಶಾಲೆಗೆ, ಅಂಗನವಾಡಿ ಕೇಂದ್ರಕ್ಕೆ ಹೋಗಿ ಬರಲು ತಾತ್ಕಾಲಿಕವಾಗಿ ವಾಹನ ವ್ಯವಸ್ಥೆ ಮಾಡಬಹುದು ಎಂದರು. ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಒಂದು ವಾಹನ ವ್ಯವಸ್ಥೆ ಮಾಡಿಸಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಕಂದಾಯ, ತಹಸೀಲ್ದಾರ್, ಬಿಇಒ, ಇಂಜಿನಿಯರ್, ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರವೇ ಸ್ಥಳಕ್ಕೆ ಭೇಟಿ ನೀಡಿ, ಏನು ಕ್ರಮ ಕೈಗೊಳ್ಳಬಹುದೆಂದು ಪರಿಶೀಲಿಸಿ, ಸೂಕ್ತ ಕ್ರಮಕ್ಕೆ ಗಮನಹರಿಸಬೇಕೆಂದು ಸೂಚಿಸಿದರು.