ಶೃಂಗೇರಿ: ಮಲೆನಾಡಿನ ಪರಿಸರ ಉಳಿಸಿರುವುದು ರೈತರು. ಅಧಿಕಾರಿಗಳು, ಶ್ರೀ ಮಂತರು ಭತ್ತ ಬೆಳೆಸುವುದಿಲ್ಲ. ಶೃಂಗೇರಿಯಲ್ಲಿ ನಡೆಯುತ್ತಿರುವ ಈ ಹೋರಾಟದ ಧ್ವನಿ ವಿಶ್ವವನ್ನು ಮುಟ್ಟಬೇಕು. ಹೋರಾಟಗಾರರು ಸಣ್ಣ ಮೀನಾಗದೇ ತಿಮಿಂಗಿಲರಾಗಬೇಕು ಎಂದು ಆದಿಚುಂಚನ ಗಿರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ, ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ, ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು ಕರೆ ನೀಡಿದ್ದ ಶೃಂಗೇರಿ ಬಂದ್ ಹಾಗೂ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ವರದಿ ಜಾರಿಗೆ ಬಂದರೆ ನಾವು ಹೆದರಬೇಕಿಲ್ಲ. 100 ವರ್ಷಗಳ ಹಿಂದೆ ಸೇತುವೆ ಇರಲಿಲ್ಲ. ನಮ್ಮ ಪೂರ್ವಿಕರು ಮಲೆನಾಡಿನಲ್ಲಿ ನೆಮ್ಮದಿಯಿಂದ ಬದುಕಿದ್ದಾರೆ. ಮಲೆನಾಡು ಭಾಗದ ರೈತರು ಯಾವುದೇ ಕಾರಣಕ್ಕೆ ವಿಚಲಿತರಾಗಬೇಡಿ. ನಮ್ಮ ಹಿರಿಯರು ರಸ್ತೆ, ಸೇತುವೆ ಇಲ್ಲದೇ ಭೂಮಿ ಉಳುಮೆ ಮಾಡಿ ಜಗತ್ತಿಗೆ ಹೊಟ್ಟೆ ತುಂಬಾ ಅನ್ನ ನೀಡುತ್ತಿದ್ದಾರೆ. ರೈತರ ಬದುಕಿನ ಜತೆ ಮರಣಶಾಸನ ಬರೆಯಲು ಹೊರಟರೆ ಸಕಲ ಜೀವರಾಶಿಗಳಿಗೆ ಕಂಟಕ ಉಂಟಾಗುತ್ತದೆ ಎಂದರು.
ರೈತ ಮುಖಂಡ ದಿಗಂತ್ ಬಿಂಬೈಲು ಮಾತನಾಡಿ, ಜಲವಿದ್ಯುತ್ ಸ್ಥಾವರ, ಗಣಿಗಾರಿಕೆ ವಿರುದ್ಧ ಅಂದು ರಾಜಕೀಯ ಪಕ್ಷದ ಮುಖಂಡರು ಬದ್ಧತೆ ತೋರಿಸಲಿಲ್ಲ. ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆ ಲಾಭ ಬಯಲುಸೀಮೆ ಜನರಿಗೆ ದೊರೆತಿದೆ. ಮಾಧವ್ ಗಾಡ್ಗೀಳ್ ವರದಿಯಲ್ಲಿ ಅರಣ್ಯ ಭೂಮಿಯನ್ನು ಅರಣ್ಯೇತರ, ಕೃಷಿ ಭೂಮಿಯನ್ನು ಕೃಷಿಯೇತರ ಹಾಗೂ ಸಾರ್ವಜನಿಕ ಭೂಮಿಯನ್ನು ಖಾಸಗಿ ಭೂಮಿ ಮಾಡಬಾರದು ಎಂದು ಹೇಳಲಾಗಿದೆ. ಈ ವರದಿಯನ್ನು ಹಲವು ರಾಜ್ಯಸರ್ಕಾರಗಳು ತಿರಸ್ಕರಿಸಿತ್ತು. ಪರಿಸರ ಸೂಕ್ಷ್ಮಪ್ರದೇಶ ಎಂದು ಮಲೆನಾಡು ಘೋಷಣೆಯಾದರೆ ರೈತರ ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ಹೇರಲಾಗುತ್ತದೆ. ರೈತರು ಹಾಗೂ ಸ್ಥಳೀಯರು ಓಡಾಡುವ ರಸ್ತೆಗಳ ದುರಸ್ತಿಗೆ ಜನಪ್ರತಿನಿಧಿಗಳು ಮುಂದಾಗಿಲ್ಲ. ಸರ್ಕಾರಿ ಯೋಜನೆಗಳು ಹಾಗೂ ಇಲ್ಲಿನ ಕಾಡನ್ನು ಉಳಿಸುವ ವರದಿಯಿಂದ ಮಲೆನಾಡಿಗರನ್ನು ಎರಡು ಬಾರಿ ಒಕ್ಕೆಲೆಬ್ಬಿಸಲಾಗಿದೆ ಎಂದರು.
ಪರಿಸರ ಸೂಕ್ಷ್ಮಪ್ರದೇಶಗಳ ಸುತ್ತಮುತ್ತ ಪ್ರದೇಶಗಳು ಕೇಂದ್ರ ಸರ್ಕಾರಕ್ಕೆ ಸೇರುತ್ತದೆ. ಮಲೆನಾಡಿಗೆ ಒಂದು ಸೇತುವೆ ಮೌಲ್ಯಮಾಪನ ಮಾಡಲು ಸಮಿತಿ ಬರುತ್ತದೆ. ಅಕೇಶಿಯಾ ಗಿಡ ನೆಟ್ಟು ಪರಿಸರ ಹಾನಿಯಾದಾಗ ಸಣ್ಣ ರೈತರು ಮಾತನಾಡಲಿಲ್ಲ. ಕಂದಾಯ, ಅರಣ್ಯ , ಗೋಮಾಳ ಜಾಗದ ಬಗ್ಗೆ ನಮಗೆ ಸರಿಯಾದ ಮಾಹಿತಿ ಇಲ್ಲ ಎಂದು ಸಂಪನ್ಮೂಲ ವ್ಯಕ್ತಿ ಶ್ರೀರಾಮಸ್ವಾಮಿ ಹುಲ್ಕೋಡು ಹೇಳಿದರು. ಅಧಿಕಾರಿಗಳು ಗ್ರಾಪಂ ಕಚೇರಿಯಲ್ಲಿ ಕುಳಿತ ಜಂಟಿ ಸರ್ವೇ ಮಾಡುತ್ತಿದ್ದಾರೆ. ಪರಿಸರ ಸೂಕ್ಷ್ಮಪ್ರದೇಶದಲ್ಲಿ ರೈತರು ಹಸ್ತಕ್ಷೇಪ ನಡೆಸಬಾರದು ಎಂಬ ವಿಷಯ ವರದಿಯಲ್ಲಿದೆ. ಮಲೆನಾಡಿನ ಎಷ್ಟು ರೈತರಿಗೆ ಭೂಮಿ ಹಕ್ಕಿನ ಪತ್ರ ಸಿಕ್ಕಿದೆ?.ಭೂ ಹಕ್ಕಿನ ಕುರಿತು ಸರಿಯಾದ ಅಂಕಿ-ಅಂಶವಿಲ್ಲ ರೈತರು ಮನೆ ಕಟ್ಟಿದ್ದರೆ ಅರಣ್ಯ ಭೂಮಿಯಲ್ಲಿದೆ. ಪ್ರತಿದಿನ ಅಧಿಕಾರಿಗಳ ದೃಷ್ಟಿಕೋನದಲ್ಲಿ ನಾವು ಕಳ್ಳರಾಗಿ ಬದುಕಬೇಕು.ಜನಪ್ರತಿನಿಧಿಗಳ ಒಡೆದು ಆಳುವ ನೀತಿಯಿಂದ ರೈತರ ಬದುಕು ಅತಂತ್ರವಾಗುತ್ತದೆ ಎಂದರು.
ಶೃಂಗೇರಿ ಪ್ರವೇಶದ್ವಾರದಿಂದ ಕುವೆಂಪು ಬಸ್‌ನಿಲ್ದಾಣದ ತನಕ ಪ್ರತಿಭಟನೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. ಬ್ಯಾಂಕ್‌ಗಳು, ಶಾಲಾ ಕಾಲೇಜುಗಳು, ಅಂಗಡಿ ಮುಂಗಟ್ಟುಗಳು, ಸಂತೆ, ಹೋಟೇಲ್, ಬಸ್, ಆಟೋ, ಸರ್ಕಾರಿ ಕಚೇರಿಗಳು ಬಂದ್‌ಗೆ ಬೆಂಬಲ ನೀಡಿದರು. ರೈತ ಸಂಘ,ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ, ಮಲೆನಾಡು ಕರಾವಳಿ ಜನಪರ ಒಕ್ಕೂಟ, ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಇತ್ಯಾದಿ ರೈತ ಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ಕಂದಾಯ ಭೂಮಿ ಅರಣ್ಯ ಭೂಮಿಯಾಗುತ್ತದೆ. ರೈತರ ಸಾಗುವಳಿ ಭೂಮಿ ಕೈ ತಪ್ಪುತ್ತದೆ ಎಂಬ ಭೀತಿಯಿಂದ ವರದಿ ವಿರೋಧಿಸಲಾಗುತ್ತಿದೆ. ಈಗಾಗಲೇ ಅರಣ್ಯ ಇಲಾಖೆ ತಮ್ಮದೇ ಸಾಮ್ರಾಜ್ಯ ಸ್ಥಾಪಿಸಲು ಹೊರಟಿದ್ದಾರೆ. ರೈತರ ಬದುಕನ್ನು ರೂಪಿಸುವ ಬದ್ಧತೆ ಜನಪ್ರತಿನಿಧಿಗಳಿಗೆ ಇರಬೇಕು. ಕೇರಳ ಸರ್ಕಾರ ಭೂ ರಹಿತರಿಗೆ ಐದು ಎಕರೆ ಭೂಮಿ ನೀಡಿ ಹಕ್ಕುಪತ್ರ ನೀಡಿದೆ
ದಿಗಂತ್ ಬಿಂಬೈಲ್ ರೈತ ಮುಖಂಡ