

ಬಾಳೆಹೊನ್ನೂರು: ಬೆಳಕಿನ ಹಬ್ಬ ದೀಪಾವಳಿಗೆ ಬಾಳೆಹೊನ್ನೂರು ಹೋಬಳಿಯಾದ್ಯಂತ ಸಂಭ್ರಮ ಕಳೆಗಟ್ಟಿದ್ದು, ಹಬ್ಬ ಆಚರಣೆಗೆ ಭರದ ಸಿದ್ದತೆ ನಡೆದಿದೆ. ದೀಪಾವಳಿ ಹಿನ್ನೆಲೆಯಲ್ಲಿ ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಪಟಾಕಿ ಅಂಗಡಿಗಳು ತಲೆ ಎತ್ತಿದ್ದು, ಬೆಲೆ ಏರಿಕೆಯ ನಡುವೆಯೂ ಪಟಾಕಿಗಳ ಖರೀದಿ ಭರದಿಂದ ನಡೆಯುತ್ತಿದೆ.
15 ದಿನಗಳ ಹಿಂದಿನಿಂದಲೇ ಪಟ್ಟಣದ ಸುತ್ತಮುತ್ತ ದೀಪಾವಳಿಯ ಸಂಭ್ರಮ ಇಮ್ಮಡಿಗೊಳಿಸಲು ಪ್ರತಿ ವರ್ಷದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾಂಪ್ರದಾಯಿಕ ಹುಲಿವೇಷ, ಸಿಂಹವೇಷಧಾರಿಗಳು, ಬಯಲುಸೀಮೆಯ ವಿವಿಧ ಕಲಾವಿದರ ತಂಡ ಆಗಮಿಸಿದ್ದು, ಮನೆ ಮನೆಗೆ ಭೇಟಿ ನೀಡಿ ಮನರಂಜನೆ ನೀಡುತ್ತಿದೆ. ವಿವಿಧೆಡೆಯಿಂದ ಬಂದಿರುವ ಸಾಂಪ್ರದಾಯಿಕ ವೇಷಧಾರಿಗಳು, ಸ್ಥಳೀಯ ಯುವಕರ ಕರಡಿ ಕುಣಿತ, ಕೊರಗನ ನೃತ್ಯ ಹಾಗೂ ಸ್ಥಳೀಯ ಗ್ರಾಮೀಣ ಪ್ರದೇಶದವರ ಅಂಟಿಕೆ, ಪಂಟಿಕೆ, ತಂಬೂರಿ ಹಾಡು, ಕೋಲಾಟ, ಜನಪದ ಹಾಡಿನ ಕಾರ್ಯಕ್ರಮವೂ ಎಲ್ಲಾ ಭಾಗಗಳಲ್ಲಿ ನಡೆಯುತ್ತಿದೆ.
ಗ್ರಾಮೀಣ ಭಾಗಗಳಲ್ಲಿ ಶನಿವಾರ ನೀರು ತುಂಬುವ ಹಬ್ಬ ನಡೆಯುವುದರೊಂದಿಗೆ ದೀಪಾವಳಿಗೆ ವಿದ್ಯುಕ್ತ ಚಾಲನೆ ದೊರೆತಿದೆ. ಮಲೆನಾಡು ಭಾಗದಲ್ಲಿ ನೀರು ತುಂಬುವ ಹಬ್ಬದ ಅಂಗವಾಗಿ ಸ್ನಾನದ ಹಂಡೆ, ಬಚ್ಚಲು ಮನೆಗಳನ್ನು ಮನೆ ಮಂದಿಯೆಲ್ಲಾ ಸೇರಿ ಸ್ವಚ್ಛಗೊಳಿಸಿ ಸ್ನಾನ ಮಾಡುವ ಹಂಡೆಗೆ ಜೇಡಿ, ಕೆಮ್ಮಣ್ಣಿನ ಚಿತ್ತಾರ ಬರೆದು, ಹಿಂಡ್ಲೆ ಕಾಯಿ ಬೀಳು, ತಳಿರು ತೋರಣ, ಚೆಂಡು ಹೂವಿನ ಮಾಲೆ ಹಾಕಿ ಶೃಂಗರಿಸಿದ್ದಾರೆ.
ಭಾನುವಾರ ಮುಂಜಾನೆ ಅಭ್ಯಂಜನ ಸ್ನಾನ ಹಾಗೂ ಮಲೆನಾಡಿನ ಸಂಪ್ರದಾಯದಂತೆ ಮನೆಗಳ ಮುಂಭಾಗ, ತೋಟ, ಗದ್ದೆಗಳಿಗೆ ಮುಂಡುಗ (ಹೂ) ಹಾಕುವ ಕಾರ್ಯ ನಡೆಯಲಿದೆ. ಈ ಬಾರಿ ಭಾನುವಾರ ಹಾಗೂ ಸೋಮವಾರ ದಿನ ಅಮಾವಾಸ್ಯೆ ಬಂದಿರುವುದರಿಂದ ಎರಡು ದಿನ ಪಟ್ಟಣದ ವಿವಿಧ ಅಂಗಡಿ ಮುಂಗಟ್ಟುಗಳಲ್ಲಿ ಲಕ್ಷ್ಮೀ ಪೂಜೆ ನೆರವೇರಲಿದೆ. ಲಕ್ಷ್ಮೀ ಪೂಜೆಗೆ ಅಂಗಡಿ ಮುಂಗಟ್ಟುಗಳ ಸ್ವಚ್ಛತಾ ಕಾರ್ಯ, ಸುಣ್ಣ ಬಣ್ಣವೂ ಬಿರುಸಿನಿಂದ ನಡೆಯುತ್ತಿದೆ. ಸೋಮವಾರ ಗೋ ಪೂಜೆ, ಬಲಿಪಾಡ್ಯಮಿ ನಡೆಯಲಿದೆ.
ಬಾಳೆಹೊನ್ನೂರು ಪಟ್ಟಣದ ಮುಖ್ಯರಸ್ತೆಯಲ್ಲಿ ಶನಿವಾರದಿಂದಲೇ ವಿವಿಧೆಡೆಯಿಂದ ಬಂದಿರುವ ಹೂ ಮಾರಾಟಗಾರರು ಅಂಗಡಿಗಳನ್ನು ತೆರೆದಿದ್ದು, ಚೆಂಡು ಹೂ, ಸೇವಂತಿಗೆ ಹೂವುಗಳ ಮಾರಾಟ ಆರಂಭಿಸಿದ್ದಾರೆ. ಹೂವಿನ ಬೆಲೆ ಏರಿಕೆಯಿದ್ದರೂ ಸಹ ಬೆಳಕಿನ ಹಬ್ಬದ ಸ್ವಾಗತಕ್ಕೆ ಜನ ಕಾತರದಿಂದ ಕಾಯುತ್ತಿದ್ದಾರೆ.