ಮಲೆನಾಡಿನ ಪಡಿತರದಾರರಿಗೆ ರಾಗಿ ಬದಲು ಅಕ್ಕಿ ವಿತರಿಸಿ

ಮಲೆನಾಡಿನ ಪಡಿತರದಾರರಿಗೆ ರಾಗಿ ಬದಲು ಅಕ್ಕಿ ವಿತರಿಸಿ
Published on: 

ಮೂಡಿಗೆರೆ: ಅನ್ನಭಾಗ್ಯ ಯೋಜನೆಯಡಿ ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರ ನೀಡುವ ಪಡಿತರದಲ್ಲಿ ಅಕ್ಕಿ ಬದಲಿಗೆ ರಾಗಿ ನೀಡುತ್ತಿರುವುದು ಸರಿಯಲ್ಲ. ಮಲೆನಾಡು ಭಾಗದ ಜನರು ರಾಗಿ ಬಳಸುವುದಿಲ್ಲ. ಸರ್ಕಾರ ರಾಗಿ ಬದಲು ಅಕ್ಕಿ ನೀಡಬೇಕು ಎಂದು ತಾಲೂಕು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತರಕ್ಷಣಾ ಒಕ್ಕೂಟದ ಕಾರ್ಯದರ್ಶಿ ಕೆ.ಕೆ.ರಾಮಯ್ಯ ಒತ್ತಾಯಿಸಿದರು.

15 ವರ್ಷದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ವಿತರಿಸಲಾಗುತ್ತಿದೆ. ಬಿಪಿಎಲ್ ಕಾರ್ಡ್‌ದಾರರಿಗೆ ಪ್ರತಿ ತಿಂಗಳು ತಲಾ 10 ಕೆಜಿ ಅಕ್ಕಿ ವಿತರಿಸಲಾಗುತ್ತಿತ್ತು. ಈ ತಿಂಗಳಲ್ಲಿ ಪ್ರತಿಯೊಬ್ಬರಿಗೂ ತಲಾ 7ಕೆಜಿ ಅಕ್ಕಿ, 3 ಕೆಜಿ ರಾಗಿ ವಿತರಿಸಲಾಗುತ್ತಿದೆ. ಅಂತ್ಯೋದಯ ಪಡಿತರ ಚೀಟಿದಾರರಿಗೆ ಕುಟುಂಬಕ್ಕೆ 21ಕೆಜಿ ರಾಗಿ, 14 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ಮಲೆನಾಡು ಭಾಗದಲ್ಲಿ ಊಟಕ್ಕೆ ಅಕ್ಕಿ ಬಳಸುತ್ತಾರೆ ಮಲೆನಾಡಿಗರಿಗೆ ರಾಗಿ ಪ್ರಯೋಜನಕ್ಕೆ ಬರುವುದಿಲ್ಲ. ಕೂಡಲೇ ರಾಗಿ ನೀಡುವುದನ್ನು ಸ್ಥಗಿತಗೊಳಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ನ್ಯಾಯಬೆಲೆ ಅಂಗಡಿಗೆಯಲ್ಲಿ ನೀಡುತ್ತಿರುವ ರಾಗಿ ಕಳಪೆಯಾಗಿದೆ. ಇಂತಹ ರಾಗಿ ಬಳಸಲು ಸಾಧ್ಯವಿಲ್ಲ. ಮಲೆನಾಡು ಭಾಗದಲ್ಲಿ ಬಡತನ ರೇಖೆಗಿಂತ ಕೆಳಗಿನವರು ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ಮಲೆನಾಡಿನ ಕಾರ್ಮಿಕರಿಗೆ ರಾಗಿಯಿಂದ ತಯಾರಿಸಿದ ಅಡುಗೆ ಊಟ ಮಾಡಿ ಅಭ್ಯಾಸವಿಲ್ಲ. ಈಗ ನ್ಯಾಯಬೆಲೆ ಅಂಗಡಿಗಳಲ್ಲಿ ರಾಗಿ ನೀಡುತ್ತಿರುವುದರಿಂದ ಬಡವರ ಊಟಕ್ಕೆ ತೊಂದರೆಯಾಗಿದೆ. ಅಧಿಕಾರಿಗಳು ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿ ನ್ಯಾಯಬೆಲೆ ಅಂಗಡಿಗಳಲ್ಲಿ ರಾಗಿ ನೀಡುವುದನ್ನು ತಡೆಹಿಡಿದು ಹಿಂದಿನಂತೆ ಪ್ರತಿಯೊಬ್ಬರಿಗೆ ತಲಾ 10ಕೆಜಿ ಅಕ್ಕಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ತಿಂಗಳಲ್ಲಿ ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ತಲಾ 7ಕೆಜಿ ಅಕ್ಕಿ ಮತ್ತು 3 ಕೆಜಿ ರಾಗಿ, ಅಂತ್ಯೋದಯ ಪಡಿತರ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ 14 ಕೆಜಿ ಅಕ್ಕಿ 21 ಕೆಜಿ ರಾಗಿ ವಿತರಿಸಲಾಗುತ್ತಿದೆ. ತಾಲೂಕಿನ ಒಂದೆರಡು ನ್ಯಾಯಬೆಲೆ ಅಂಗಡಿಗಳಿಂದ ರಾಗಿ ಬೇಡಿಕೆ ಬಂದಿದ್ದರಿಂದ ರಾಗಿವಿತರಣೆ ನಡೆಯುತ್ತಿದೆ. ರಾಗಿ ಬೇಡವೆಂದು ಬಹುತೇಕ ಪಡಿತರ ಚೀಟಿ ಹೊಂದಿದವರು ಹೇಳುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗುವುದು

ಎಸ್.ಅಶ್ವಿನಿ ಮೂಡಿಗೆರೆ ತಹಸೀಲ್ದಾರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net