

ಮೂಡಿಗೆರೆ: ಜಿಲ್ಲಾ ಪಂಚಾಯಿತಿಯ 5 ಮತ್ತು ತಾಲೂಕು ಪಂಚಾಯಿತಿಯ 9 ಕ್ಷೇತ್ರದ ಪೈಕಿ ಎಲ್ಲ ಕ್ಷೇತ್ರದಲ್ಲಿ ಮುಸ್ಲಿಮರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯೊಡ್ಡಲು ವ್ಯವಸ್ಥಿತ ಪಿತೂರಿ ನಡೆದಿದೆ. ಕರಡು ಮೀಸಲಾತಿ ಪಟ್ಟಿಯನ್ನು ಸರ್ಕಾರ ಹಿಂಪಡೆದು ಕಾಯಂ ಮೀಸಲಾತಿ ಪಟ್ಟಿಯಲ್ಲಿ ಮುಸ್ಲಿಮರಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಮುಸ್ಲಿಂ ಮುಖಂಡರು ಮಂಗಳವಾರ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಚರ್ಚಿಸಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಕಿರುಗುಂದ ಅಬ್ಬಾಸ್ ಮಾತನಾಡಿ, ಮೂಡಿಗೆರೆ ತಾಲೂಕಿನ 5 ಕ್ಷೇತ್ರದಲ್ಲಿ ಕರಡು ಮೀಸಲಾತಿ ಪಟ್ಟಿ ಪ್ರಕಾರ ಸಾಮಾನ್ಯ ಮಹಿಳೆ 2, ಪ.ಜಾತಿ 1, ಪ.ಪಂಗಡ ಮಹಿಳೆ 1, ಸಾಮಾನ್ಯ ವರ್ಗಕ್ಕೆ 1. ತಾಪಂ 9 ಸ್ಥಾನದ ಪೈಕಿ ಸಾಮಾನ್ಯ 3, ಸಾಮಾನ್ಯ ಮಹಿಳೆ 2, ಪ.ಜಾತಿ ಸಾಮಾನ್ಯ 1, ಪ.ಜಾತಿ ಮಹಿಳೆ 2, ಪ.ಪಂಗಡ ಮಹಿಳೆ 1. ಹೀಗೆ ಮೀಸಲಾತಿ ಪ್ರಕಟಿಸಲಾಗಿದೆ.
ಬಿಸಿಎಂ(ಎ) ವರ್ಗಕ್ಕೆ 1 ಸ್ಥಾನವನ್ನು ಕೂಡ ಕರಡು ಮೀಸಲಾತಿ ಪಟ್ಟಿಯಲ್ಲಿ ಪ್ರಕಟಿಸಿಲ್ಲ. ಇದರಿಂದ ಮುಸ್ಲಿಮರು ಚುನಾವಣಾ ರಾಜಕೀಯದಿಂದ ವಂಚಿತವಾಗಲಿದ್ದಾರೆ. ಜಿಪಂ 5 ಕ್ಷೇತ್ರದ ಪೈಕಿ ಬಿಸಿಎಂ(ಎ) ವರ್ಗಕ್ಕೆ 2. ತಾಪಂ 9 ಕ್ಷೇತ್ರದ ಪೈಕಿ ಬಿಸಿಎಂ(ಎ) ವರ್ಗಕ್ಕೆ 3 ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಬೇಕು. ಈ ಕರಡು ಮೀಸಲಾತಿಗೆ ಆಕ್ಷೇಪಣೆ ಸಲ್ಲಿಸಿದ್ದು, ಸರ್ಕಾರ ಕರಡು ಮೀಸಲಾತಿ ಪಟ್ಟಿ ಮಾರ್ಪಾಡುಗೊಳಿಸಿ ಕಾಯಂ ಮೀಸಲಾತಿ ಪಟ್ಟಿಯಲ್ಲಿ ಮುಸ್ಲಿಮರಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಮುಸ್ಲಿಂ ಮುಖಂಡ ಮಹಮ್ಮದ್ ಹನೀಫ್ ಹೈದ್ರೋಸ್ ಮಾತನಾಡಿ, ಈಗ ಹೊರಡಿಸಿರುವ ಕರಡು ಮೀಸಲಾತಿ ಪಟ್ಟಿಯನ್ನು ಸರ್ಕಾರ ಹಿಂಪಡೆದು ಹೊಸದಾಗಿ ಮೀಸಲಾತಿ ಪ್ರಕಟಿಸಬೇಕು. ತಾಲೂಕಿನಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದ್ದು, ಈ ಬಗ್ಗೆ ಅಧಿಕಾರಿಗಳಿಂದ ವರದಿ ಪಡೆದು ಮುಸ್ಲಿಮರು ಹೆಚ್ಚಾಗಿರುವ ಪ್ರದೇಶದಲ್ಲಿ ಬಿಸಿಎಂ(ಎ) ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕರಡು ಮೀಸಲಾತಿ ಪಟ್ಟಿ ಪರಿಷ್ಕರಿಸಿ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಸ್ಪರ್ಧಿಸಲು ಮುಸ್ಲಿಮರಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಗುರುವಾರ ಸಿಎಂ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಸಹಿತ ಉನ್ನತಮಟ್ಟದ ಅಧಿಕಾರಿಗಳಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಮುಸ್ಲಿಂ ಮುಖಂಡರಾದ ಎಂ.ಎಚ್.ಮಹಮ್ಮದ್ ಹನೀಫ್, ಜಾಕಿರ್ ಹುಸೇನ್, ಎ.ಎಂ.ಶರೀಫ್, ಗೌಸ್ ಮೊಹಿದ್ದೀನ್, ಅಬ್ರಾರ್ ಅಹಮದ್, ಅಕ್ರಮ್ ಹಾಜಿ, ಇರ್ಫಾನ್, ಆಸಿಫ್ ಬಾಪುನಗರ, ಜಾಕಿರ್ ಅಲಿ ಖಾನ್, ಹನೀಫ್ ಹಾಜಿ, ಆದಂ, ಫಾರೂಕ್, ಅಮ್ಜದ್, ಕೆ.ಪಿ.ಖಾಲಿದ್, ಎಂ.ಯು.ಶರೀಫ್, ಅಶ್ರಫ್, ಅಜ್ಮಲ್, ಸಾಧಿಕ್ ಇತರರಿದ್ದರು.