ಪ್ರತ್ಯೇಕ ರೈತ ಸಂಘಟನೆ ಘೋಷಣೆಗೆ ನಿರ್ಧಾರ

ರೈತಸಂಘದಿಂದ ಉಚ್ಛಾಟಿತರಾಗಿರುವ ವೈ.ಸಿ.ಸುನೀಲ್‌ಕುಮಾರ್
ರೈತಸಂಘದಿಂದ ಉಚ್ಛಾಟಿತರಾಗಿರುವ ವೈ.ಸಿ.ಸುನೀಲ್‌ಕುಮಾರ್
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದಲ್ಲಿ ಸಕ್ರೀಯರಾಗಿದ್ದ ಮೂವರನ್ನು ಉಚ್ಛಾಟನೆ
  • ರೈತ ಪರ ಚಳವಳಿಯಿರುವ ಪ್ರತ್ಯೇಕಬಣದಲ್ಲಿ ಗುರುತಿಸಿಕೊಳ್ಳಲಿದ್ದೇವೆ
ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ರೈತ ಸಂಘದಲ್ಲಿ ಸಕ್ರೀಯರಾಗಿದ್ದ ಮೂವರನ್ನು ಉಚ್ಛಾಟಿಸಿದ್ದು,ನಾವೂ ಕೂಡ ಇಂದಿನಿಂದಲೇ ಅವರ ಬಣದಲ್ಲಿ ಕಡ್ಡಾಯಗೊಳಿಸಿರುವ ಚಿನ್ಹೆ ಇರುವ ಶಾಲನ್ನು ತಿರಸ್ಕರಿಸಿ ರೈತ ಪರ ಚಳವಳಿಯಿರುವ ಪ್ರತ್ಯೇಕಬಣದಲ್ಲಿ ಗುರುತಿಸಿಕೊಳ್ಳಲಿದ್ದೇವೆ ಎಂದು ರೈತಸಂಘದಿಂದ ಉಚ್ಛಾಟಿತರಾಗಿರುವ ವೈ.ಸಿ.ಸುನೀಲ್‌ಕುಮಾರ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತಸಂಘದ ರಾಜ್ಯಾಧ್ಯಕ್ಷರು ನಮಗೆ ಸದಸ್ಯತ್ವ ನೀಡಿ ನಮ್ಮ ಕೋರಿಕೆ ಇಲ್ಲದಿದ್ದರೂ ಪದಾಕಾರಿ ಹುದ್ದೆ ನೀಡಿ ಚೆನ್ನಾಗಿ ದುಡಿಸಿಕೊಂಡಿದ್ದರು. ಈಗ ನಾನು, ಪರ್ವತೇಗೌಡ ಮತ್ತು ರಾಮೇಗೌಡ ಅವರನ್ನು ಉಚ್ಛಾಟಿಸಿದ್ದಾರೆ. ಹೋರಾಟಗಾರರನ್ನು ಉಚ್ಛಾಟನೆ ಮೂಲಕ ಕುಗ್ಗಿಸಲಾಗದು. ಕರ್ನಾಟಕ ರಾಜ್ಯ ರೈತಸಂಘ ಯಾರೊಬ್ಬರ ಸ್ವತ್ತಲ್ಲ ಎಂದು ಹೇಳಿದರು.
ಇಂದಿನಿಂದಲೇ ಅವರ ಚಿನ್ಹೆ ಇರುವ ಶಾಲನ್ನು ತಿರಸ್ಕರಿಸಿ ಸಾದಾ ಶಾಲನ್ನು ಧರಿಸುತ್ತೇವೆ. ನಮಗೆ ಆಗಿರುವ ಅನ್ಯಾಯದ ಬಗ್ಗೆ ಸರ್ವ ಸದಸ್ಯರಲ್ಲಿ ಚರ್ಚಿಸಲಾಗಿದೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗಿದೆ. ರಾಜ್ಯದಲ್ಲಿ ರೈತ ಪರ ಚಳವಳಿ ಮಾಡುವ ಅನೇಕ ಬಣಗಳಿದ್ದಾವೆ. ರಾಜ್ಯಾಧ್ಯಕ್ಷರಿದ್ದಾರೆ. ಅಂತಹ ಬಣಕ್ಕೆ ಬೆಂಬಲಿಸುತ್ತೇವೆ. ನೀತಿ ಇಲ್ಲದ ನಾಗೇಂದ್ರ ಬಣದಿಂದ ಹೊರಬರುತ್ತಿದ್ದೇವೆ. ಪ್ರತ್ಯೇಕ ಸಂಘಟಿತರಾಗಿ ರೈತರ ಹಿತ ಕಾಪಾಡುತ್ತೇವೆ. ಈ ಬಗ್ಗೆ ಸಧ್ಯದಲ್ಲೇ ರೈತ ಮುಖಂಡ ಕೆ.ಕೆ.ಕೃಷ್ಣೇಗೌಡ ನೇತೃತ್ವದಲ್ಲಿ ಜಿಲ್ಲಾಸಮಿತಿ ಮತ್ತು ತಾಲೂಕು ಸಮಿತಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೆ.ಕೆ.ಕೃಷ್ಣೇಗೌಡ, ಪರ್ವತೇಗೌಡ, ಡಿ.ರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net