ಕೊಪ್ಪ ತಾಪಂನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿದರು. ಲಿಖಿತಾ ಮೋಹನ್, ಎಚ್.ಡಿ.ನವೀನ್‌ಕುಮಾರ್, ಅನ್ನಪೂರ್ಣಾ ಇತರರಿದ್ದರು.
ಕೊಪ್ಪ: ತುರ್ತು ಕಾಮಗಾರಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಲಿದೆ. ಅತಿವೃಷ್ಟಿ ಹಾನಿ ಬಗ್ಗೆ ಅಧಿಕಾರಿಗಳು ವರದಿ ಮಾಡಬೇಕು. ಈ ಹಿಂದೆ ಯಶಸ್ವಿಯಾಗಿ ಕೆಲಸ ಮಾಡಿದ್ದೀರಿ. ಈ ಬಾರಿಯೂ ಎಲ್ಲ ಇಲಾಖೆ ಅಧಿಕಾರಿಗಳು ಹೊಂದಾಣಿಕೆ ಮೂಲಕ ಕೆಲಸ ಮಾಡಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ತಾಪಂನಲ್ಲಿ ಶುಕ್ರವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಅತಿವೃಷ್ಟಿ ಪರಿಸ್ಥಿತಿ ನಿರ್ವಹಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಹಾನಿಯಾದರೆ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಒದಗಿಸಿಕೊಡಬೇಕು ಎಂದು ಸೂಚಿಸಿದರು.
ರಸ್ತೆ, ಮನೆ, ಶಾಲೆ, ಅಂಗನವಾಡಿ ಬಳಿ ಇರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಸಂಬಂಧಿಸಿದವರು ಅರ್ಜಿ ಕೊಟ್ಟು ಹಿಂಬರಹ ಇಟ್ಟುಕೊಳ್ಳಬೇಕು. ಮರ ತೆರವುಗೊಳಿಸದೆ ಹಾನಿ ಸಂಭವಿಸಿದರೆ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ವಿದ್ಯುತ್ ತಂತಿ, ಕಂಬಕ್ಕೆ ಹಾನಿ ಮಾಡುವ ರೆಂಬೆಗಳನ್ನು ತುರ್ತಾಗಿ ತೆರವುಗೊಳಿಸಿ ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಅತಿವೃಷ್ಟಿ ಪರಿಸ್ಥಿತಿ ನಿರ್ವಹಣೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಶೌರ್ಯ ವಿಪತ್ತು ನಿರ್ವಹಣೆ ತಂಡದೊಂದಿಗೆ ಸಂಪರ್ಕ ಇಟ್ಟುಕೊಳ್ಳಬೇಕು. ಅಧಿಕಾರಿಗಳ ಫೋನ್ ಯಾವಾಗಲೂ ಆನ್‌ನಲ್ಲಿರಿಸಿಕೊಳ್ಳಬೇಕು. ಜನಸಾಮಾನ್ಯರ ಫೋನ್ ಕರೆಗೆ ಸ್ಪಂದಿಸಿ ಎಂದರು.
ತಾಲೂಕಿನಲ್ಲಿ 4.75 ಕೋಟಿ ರೂಪಾಯಿ ಮೂಲಕ ಕುಂಚೂರು ಘಾಟಿ, ಬಸರಿಕಟ್ಟೆಯಲ್ಲಿ 3.50 ಕೋಟಿ ವೆಚ್ಚದಲ್ಲಿ ನಿರ್ವಹಣೆ ಮಾಡಿ ಕೊಟ್ಟಿದ್ದೇವೆ. ಪಿಆರ್‌ಇಡಿ ಮೂಲಕ 7.5 ಕೋಟಿ, ಪಿಬ್ಲುೃಡಿ ಮೂಲಕ 12 ಕೋಟಿ ರೂ. ವೆಚ್ಚದ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿ ಆರಂಭಗೊಂಡಿದೆ ಎಂದು ತಿಳಿಸಿದರು.
ಕೆಡಿಪಿ ಸದಸ್ಯೆ ಪ್ರಿಯಾಂಕಾ ಮಾತನಾಡಿ, ಬಿಳಾಲುಕೊಪ್ಪ, ಬಸ್ರಿಕಟ್ಟೆ ರಸ್ತೆಯಲ್ಲಿ ಚರಂಡಿಗೆ ಟಿಂಬರ್ ಹಾಕಿ ಹಾನಿ ಮಾಡುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು. ಇನ್ನೋರ್ವ ಸದಸ್ಯ ರಾಜಶಂಕರ್ ಮಾತನಾಡಿ, ಅಮ್ಮಡಿ ಕಾಫಿ ಎಸ್ಟೇಟ್ ಪಕ್ಕದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮರ ಕತ್ತರಿಸಿ ಚರಂಡಿ, ರಸ್ತೆಗೆ ಸೇರಿಸಿ ಹಾಕಿದ್ದಾರೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಅತಿವೃಷ್ಟಿ ನಿರ್ವಹಣೆ ತಂಡ ರಚಿಸಿದ್ದೇವೆ. ಪೊಲೀಸ್, ಅಗ್ನಿಶಾಮಕ ಠಾಣೆ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ತಂಡದಲ್ಲಿ ಇದ್ದಾರೆ. 5 ಕಡೆ ಮಳೆ ಮಾಪನ ಕೇಂದ್ರ ಸಮರ್ಪಕವಾಗಿ ಇದೆ. ಈ ಬಾರಿ ಮಳೆ ಕೊರತೆ ಸಾಧ್ಯತೆ ಇರುವುದರಿಂದ ಅತಿವೃಷ್ಟಿ ಸಮಸ್ಯೆ ಕಡಿಮೆಯಾಗಬಹುದು ಎಂದು ತಹಸೀಲ್ದಾರ್ ಲಿಖಿತಾ ಮೋಹನ್ ತಿಳಿಸಿದರು. ರಸ್ತೆ ಸಂಪರ್ಕ ಕಡಿತಗೊಂಡರೆ ಪರ್ಯಾಯ ಮಾರ್ಗ ಗುರುತಿಸಲಾಗಿದೆ. ಕೆಲವು ಗ್ರಾಮಗಳನ್ನು ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಕಾಳಜಿ ಕೇಂದ್ರ ತೆರೆಯಲಾಗುತ್ತದೆ. ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಹಾಯವಾಣಿ ಕೇಂದ್ರ ತೆರೆಯಲಾಗಿದೆ ಎಂದು ತಿಳಿಸಿದರು.
ತಾಪಂ ಇಒ ಎಚ್.ಡಿ.ನವೀನ್‌ಕುಮಾರ್, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಓಣಿತೋಟ ರತ್ನಾಕರ್, ಕೆಡಿಪಿ ಸಭೆ ಸದಸ್ಯರಾದ ಅಶೋಕ್ ನಾರ್ವೆ, ಬಿ.ಪಿ.ಚಿಂತನ್ ಬೆಳಗೊಳ, ಮಹಮ್ಮದ್ ಸಾದಿಕ್, ಬಗರ್ ಹುಕುಂ ಸಮಿತಿ ಸದಸ್ಯರಾದ ಅನ್ನಪೂರ್ಣಾ ನರೇಶ್, ನುಗ್ಗಿ ಮಂಜುನಾಥ್ ಇದ್ದರು.