ಘನತ್ಯಾಜ್ಯ ನಿರ್ವಹಣೆಯಲ್ಲಿ ಮಾದರಿ ಜಿಲ್ಲೆಯಾಗಿಸಲು ಡಿಸಿ ಸೂಚನೆ

ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಭನ್ವರ್‌ ಸಿಂಗ್‌ ಮೀನಾ ಅಧ್ಯಕ್ಷತೆಯಲ್ಲಿ ಘನತ್ಯಾಜ್ಯ ನಿರ್ವಹಣಾ ನಿಯಮಗಳು ೨೦೨೬ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಘನತ್ಯಾಜ್ಯ ನಿರ್ವಹಣೆ ಕುರಿತ ಸಭೆ ನಡೆಯಿತು. ಗೌರವ್‌ ಕುಮಾರ್‌ ಶೆಟ್ಟಿ, ಡಾ.ಅಶ್ವಥ್‌ಬಾಬು, ಗೋಪಾಲ್‌ ಜಾಧವ್‌, ರಾಜು, ವಿನಾಯಕ್‌ ಸಾಗರ್‌, ಪೂರ್ಣಿಮಾ ಮತ್ತಿತರರಿದ್ದರು.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಭನ್ವರ್‌ ಸಿಂಗ್‌ ಮೀನಾ ಅಧ್ಯಕ್ಷತೆಯಲ್ಲಿ ಘನತ್ಯಾಜ್ಯ ನಿರ್ವಹಣಾ ನಿಯಮಗಳು ೨೦೨೬ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಘನತ್ಯಾಜ್ಯ ನಿರ್ವಹಣೆ ಕುರಿತ ಸಭೆ ನಡೆಯಿತು. ಗೌರವ್‌ ಕುಮಾರ್‌ ಶೆಟ್ಟಿ, ಡಾ.ಅಶ್ವಥ್‌ಬಾಬು, ಗೋಪಾಲ್‌ ಜಾಧವ್‌, ರಾಜು, ವಿನಾಯಕ್‌ ಸಾಗರ್‌, ಪೂರ್ಣಿಮಾ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆ
  • ಜಿಲ್ಲಾಧಿಕಾರಿ ಭನ್ವರ್‌ ಸಿಂಗ್‌ ಮೀನಾ ಸೂಚನೆ
ಚಿಕ್ಕಮಗಳೂರು:
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಘನತ್ಯಾಜ್ಯ ನಿರ್ವಹಣಾ ನಿಯಮಗಳು ೨೦೨೬ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಜಿಲ್ಲಾ ಮಟ್ಟದ ಘನತ್ಯಾಜ್ಯ ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮನೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ ಅದು ಹಳೆಯ ತ್ಯಾಜ್ಯವಾಗಿ ಮಾರ್ಪಟ್ಟು ಪರಿಸರಕ್ಕೆ ಹಾನಿಯುಂಟು ಮಾಡುತ್ತದೆ. ಆದ್ದರಿಂದ ಮನೆ ಮನೆ ಕಸ ಸಂಗ್ರಹಣೆಗೆ ಹೊಸ ನಿಯಮಗಳ ಪ್ರಕಾರ ನಾಲ್ಕು ರೀತಿಯ ವಿಂಗಡಣೆಗಳನ್ನು ಜಾರಿಗೆ ತರಬೇಕು. ವಿಂಗಡಿಸಿದ ಕಸವನ್ನು ಪ್ರತ್ಯೇಕವಾಗಿ ಸಂಸ್ಕರಣಾ ಘಟಕಗಳಿಗೆ ತಲುಪಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಮಗ್ರ ಮೇಲ್ವಿಚಾರಣಾ ತಂತ್ರಜ್ಞಾನ ಹಾಗೂ ಮ್ಯಾಪಿಂಗ್ ವ್ಯವಸ್ಥೆ ರೂಪಿಸಬೇಕು ಎಂದು ಹೇಳಿದರು.
ಈಗಾಗಲೇ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಚತಾ ವಾಹಿನಿಗಳ ಮೂಲಕ ಕಸವನ್ನು ವಿಲೇವಾರಿ ಮಾಡಲಾಗುತ್ತಿದೆ. ಕಸ ವಿಲೇವಾರಿ ಮಾಡುವವರಿಗೆ ಘನತ್ಯಾಜ್ಯ ನಿರ್ವಹಣೆ ನಿಯಮಗಳ ಬಗ್ಗೆ ಸೂಕ್ತ ತರಬೇತಿ ನೀಡಬೇಕು. ಎಲ್ಲ ಬೃಹತ್ ಪ್ರಮಾಣದ ತ್ಯಾಜ್ಯ ಉತ್ಪಾದಕರನ್ನು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಬೇಕು. ಅವರು ಎಷ್ಟು ತ್ಯಾಜ್ಯ ಸಂಗ್ರಹಣೆ ಹಾಗೂ ಸಂಸ್ಕರಣೆ ಮಾಡುತ್ತಿದ್ದಾರೆ ಹಾಗೂ ಎಷ್ಟು ಬಾಕಿ ಉಳಿದಿದೆ ಎಂಬ ಬಗ್ಗೆ ಸ್ಪಷ್ಟ ತಿಳುವಳಿಕೆ ನೀಡಬೇಕು. ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗುವ ಸ್ಥಳಗಳಲ್ಲಿ ವೈಜ್ಞಾನಿಕ ಕಸ ವಿಂಗಡಣೆಗೆ ಆದ್ಯತೆ ನೀಡಬೇಕು ಎಂದರು.
ಪ್ಲಾಸ್ಟಿಕ್ ಬಾಟಲಿ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಮತ್ತು ಬಯೋಮೆಡಿಕಲ್ ತ್ಯಾಜ್ಯಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎಂಪಾನಲ್ ಆಗಿರುವ ಅಧಿಕೃತ ಏಜೆನ್ಸಿಗಳ ಮೂಲಕ ಸಮರ್ಪಕ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.
ಪರಿಸರಕ್ಕೆ ಮಾರಕವಾಗಿರುವ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಲು ಪರ್ಯಾಯ ಹಸಿರು ಉತ್ಪನ್ನಗಳನ್ನು ಉತ್ಪಾದಿಸುವ ಉದ್ದಿಮೆಗಳನ್ನು ಪ್ರೋತ್ಸಾಹಿಸಬೇಕು. ಮಾರುಕಟ್ಟೆಯಲ್ಲಿ ಪರಿಸರ ಸ್ನೇಹಿ ಉತ್ಪನ್ನಗಳು ಸುಲಭವಾಗಿ ದೊರೆಯುವಂತೆ ಮಾಡಬೇಕು. ಈ ಕುರಿತು ಸಾರ್ವಜನಿಕ ಜಾಗೃತಿ ಮತ್ತು ಶಾಲಾ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಘನತ್ಯಾಜ್ಯ ನಿರ್ವಹಣಾ ನಿಯಮಗಳ ಅನುಸಾರ ಕಾರ್ಯ ನಿರ್ವಹಿಸುವ ಸಲುವಾಗಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಡನೆ ಮಾಲಿನ್ಯ ನಿಯಂತ್ರಣ ಮಂಡಳಿಯವರು ಸೂಕ್ತ ಸಹಕಾರ ನೀಡಲು ಸೂಚಿಸಿದರು.
ಎಂ.ಆರ್.ಎಫ್ ಘಟಕಗಳ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಸ್ಥಳೀಯ ಸಂಸ್ಥೆಗಳು ಘನತ್ಯಾಜ್ಯ ನಿರ್ವಹಣಾ ನಿಯಮಗಳು-೨೦೨೬ ರ ಪರಿಣಾಮಕಾರಿ ಅನುಷ್ಠಾನದ ಕುರಿತು ಅಗತ್ಯ ತರಬೇತಿ ನೀಡಬೇಕು. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೊಳಪಡುವ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳು ತಮ್ಮ ಸುತ್ತಮುತ್ತಲಿನ ಘನತ್ಯಾಜ್ಯ ವಿಲೇವಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ ಪ್ರವಾಸೋದ್ಯಮ ಇಲಾಖೆ ಜಿಲ್ಲೆಯ ಪ್ರವಾಸಿ ಹಾಗೂ ಪ್ರೇಕ್ಷಣೀಯ ಸ್ಥಳಗಳಲ್ಲಿ ಘನತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗೌರವ ಕುಮಾರ್ ಶೆಟ್ಟಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ರಾಜು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಗೋಪಾಲ್ ಜಾಧವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು, ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜು, ಅಜ್ಜಂಪುರ ತಹಸೀಲ್ದಾರ್ ವಿನಾಯಕ ಸಾಗರ್, ಕಡೂರು ತಹಸೀಲ್ದಾರ್ ಪೂರ್ಣಿಮಾ ಮುಂತಾದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net