ನಿಡಘಟ್ಟದ ಶ್ರೀ ಆಂಜನೇಯ ಸ್ವಾಮಿ ದೇಗುಲಕ್ಕೆ ದಲಿತರ ಪ್ರವೇಶ

ಕಡೂರಿನ ನಿಡಘಟ್ಟ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯಕ್ಕೆ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ನೇತೃತ್ವದಲ್ಲಿ ದಲಿತರು ದೇಗುಲ ಪ್ರವೇಶಿಸಿದರು.
ಕಡೂರಿನ ನಿಡಘಟ್ಟ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯಕ್ಕೆ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ನೇತೃತ್ವದಲ್ಲಿ ದಲಿತರು ದೇಗುಲ ಪ್ರವೇಶಿಸಿದರು.
Published on
ಕಡೂರು: ಮೂಢನಂಬಿಕೆಯಿಂದ ಕಳೆದ ಐದು ದಶಕದಿಂದ ದೇವಸ್ಥಾನದ ಪ್ರವೇಶವಿಲ್ಲದ ಗ್ರಾಮದ ದಲಿತರು ತಹಸೀಲ್ದಾರ್ ನೇತೃತ್ವದಲ್ಲಿ ದೇವಸ್ಥಾನಕ್ಕೆ ಪ್ರವೇಶ ಪಡೆದರು.
ತಾಲೂಕಿನ ನಿಡಘಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ದಲಿತರ ಪ್ರವೇಶವಿರಲಿಲ್ಲ. ಮೂಢನಂಬಿಕೆ ಹಾಗೂ ಹಿಂದಿನಿಂದ ನಡೆದು ಬಂದ ಪದ್ದತಿಯಂತೆ ದಲಿತರು ದೇವಸ್ಥಾನಕ್ಕೆ ಪ್ರವೇಶ ಮಾಡುತ್ತಿರಲಿಲ್ಲ. ಬದಲಾದ ಕಾಲಮಾನದಲ್ಲಿ ದಲಿತರಿಗೂ ಪ್ರವೇಶ ನೀಡಬೇಕು ಎಂದು ಗ್ರಾಮದ ದಲಿತ ಮುಖಂಡರು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾಗೆ ಮನವಿ ಸಲ್ಲಿಸಿದ್ದರು.
ನಂತರ ತಹಸೀಲ್ದಾರ್ ನೇತೃತ್ವದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಒಳಗೊಂಡಂತೆ ದಲಿತ ಮುಖಂಡರ ಸಮ್ಮುಖದಲ್ಲಿ ತಾಲೂಕು ಕಚೇರಿಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಸಕರಾತ್ಮಕ ಸ್ಪಂದನೆಯೊಂದಿಗೆ ದೇವಾಲಯ ಪ್ರವೇಶಾವಕಾಶಕ್ಕೆ ಸಹಮತಗೊಂಡಿತು. ಈ ಹಿನ್ನಲೆಯಲ್ಲಿ ಮಂಗಳವಾರ ದೇವಸ್ಥಾನಕ್ಕೆ ಆಗಮಿಸಿದ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಇಒ ಸಿ.ಆರ್. ಪ್ರವೀಣ್, ಸಮಾಜ ಕಲ್ಯಾಣಾಧಿಕಾರಿ ನಟರಾಜ್, ಡಿವೈಎಸ್ಪಿ ಪರಶುರಾಮಪ್ಪ, ಸಿಪಿಐ ರಫೀಕ್ ನೇತೃತ್ವದ ಪೊಲೀಸ್ ಸಿಬ್ಬಂದಿಗಳೊಂದಿಗೆ ಗ್ರಾಮದ ದಲಿತರು ಅಧಿಕಾರಿಗಳ ಸಮ್ಮುಖದಲ್ಲಿ ದೇವಾಲಯ ಪ್ರವೇಶಿಸಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ದಶಕಗಳ ಕಾಲ ನಡೆದುಬಂದ ಪದ್ದತಿಗೆ ಕೊನೆ ಹಾಡಿದರು.
ಗ್ರಾಮದಲ್ಲಿ ದಲಿತರಿಗೆ ದೇವಸ್ಥಾನಕ್ಕೆ ಪ್ರವೇಶ ನೀಡುವುದಿಲ್ಲ ಎಂದು ಯಾರೂ ಇದುವರೆಗೂ ಹೇಳಿಲ್ಲ. ಪೂರ್ವಿಕರ ಕಾಲದಿಂದಲೂ ನಡೆದು ಬಂದಂತೆ ಅವರು ದೇವಸ್ಥಾನಕ್ಕೆ ಬರುತ್ತಿರಲಿಲ್ಲ. ಈಗ ಅವರೆಲ್ಲರೂ ದೇವಸ್ಥಾನಕ್ಕೆ ಬರಲು ಉತ್ಸುಕರಾಗಿದ್ದು, ಇದಕ್ಕೆ ನಮ್ಮ ಅಭ್ಯಂತರ ಇಲ್ಲ. ಗ್ರಾಮದ ಆಂಜನೇಯ ಸ್ವಾಮಿ ದೇವಾಲಯಕ್ಕೆ ಅಕ್ಕಪಕ್ಕದ ಜಿಲ್ಲೆಗಳ ಭಕ್ತರು ಆಗಮಿಸುತ್ತಾರೆ. ಆದರೆ ಅಧಿಕಾರಿಗಳು ಮತ್ತು ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಪ್ರವೇಶ ಮಾಡಿರುವುದು ಒಂದು ರೀತಿ ಇರಿಸುಮುರಿಸು ಉಂಟಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net