ಪಂಚನಹಳ್ಳಿ: ಹಾಲು ಉತ್ಪಾದಕರ ಸಹಕಾರ ಸಂಘದ ಬೆಳವಣಿಗೆಯಲ್ಲಿ ರೈತರು, ಸಂಘಗಳು, ಒಕ್ಕೂಟಗಳು ಸರಪಳಿಯಂತೆ ಕಾರ್ಯ ನಿರ್ವಹಿಸಿದಾಗ ರೈತರು ಲಾಭಾಂಶದ ಜತೆಗೆ ಸಂಘದ ಬೆಳವಣಿಗೆ ಸಾಧ್ಯ ಎಂದು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಟಿ.ಕೆ.ಜಗದೀಶ್ ತಿಳಿಸಿದರು.
ತಾಲೂಕಿನ ದೊಡ್ಡಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ತಾಲೂಕು ಸತತವಾಗಿ ಮಳೆ ಇಲ್ಲದೆ ಬರಗಾಲಕ್ಕೆ ತುತ್ತಾದರೂ ಸಹ ಹೈನುಗಾರಿಕೆ ರೈತರ ಕೈ ಹಿಡಿದಿದೆ. ಇಂದು ದೇಶದಾದ್ಯಂತ ನಂದಿನಿ ಹಾಲು ಮತ್ತು ಉತ್ಪನ್ನಗಳು ಉತ್ತಮ ಗುಣಮಟ್ಟ ಕಾಪಾಡಿಕೊಂಡು ಜನಪ್ರಿಯವಾಗಿದೆ ಎಂದರೆ ಅದಕ್ಕೆ ಮೂಲ ಕಾರಣ ರೈತರು ಎಂದರು.
ರಾಜ್ಯದಲ್ಲಿಯೇ ಹಾಸನ ಹಾಲು ಒಕ್ಕೂಟದಲ್ಲಿ ಹೆಚ್ಚು ಹಾಲು ಉತ್ಪಾದನೆ ಆಗುತ್ತಿದ್ದು 15ಲಕ್ಷ ಲೀಟರ್ ಪ್ರತಿದಿನ ಸರಬರಾಜಾಗುತ್ತಿದೆ. ಹೈನುಗಾರಿಕೆ ರೈತರ ಪ್ರಮುಖ ಕಾರ್ಯವಾಗಿದೆ. ಹಾಸನದಲ್ಲಿ ನಿರ್ಮಾಣವಾಗಿರುವ 800 ಕೋಟಿ ರೂ. ವೆಚ್ಚದ ಮೆಗಾ ಡೈರಿಯಿಂದ ರೈತರಿಗೆ ಹೆಚ್ಚು ಅನುಕೂಲವಾಗಿದ್ದು, ಇದರ ಪರಿಶ್ರಮಕ್ಕೆ ಅಧ್ಯಕ್ಷ ಎಚ್.ಡಿ .ರೇವಣ್ಣ ಮೂಲ ಕಾರಣ ಎಂದು ತಿಳಿಸಿದರು.
ವಿಸ್ತರಣಾಧಿಕಾರಿ ಭರತ್ ಕುಮಾರ್ ಮಾತನಾಡಿ, ರೈತರು ಹೆಚ್ಚು ಹಾಲು ಉತ್ಪಾದನೆ ಮಾಡುವ ದೃಷ್ಟಿಯಿಂದ ರಾಸುಗಳ ನಿರ್ವಹಣೆ ಬಹಳ ಮುಖ್ಯ. ನಂದಿನಿ ಉತ್ಪನ್ನಗಳಲ್ಲಿ ತಯಾರಿಸಿದ ಪಶುಆಹಾರ, ಖನಿಜ ಮಿಶ್ರಣದಂತ ಉತ್ಪನ್ನಗಳನ್ನು ಬಳಸಿ ರಾಸುಗಳನ್ನು ಸರಿಯಾಗಿ ನಿರ್ವಹಿಸಿದಾಗ ಹೆಚ್ಚಿನ ಲಾಭ ಪಡೆಯಬಹುದು. ಇಲಾಖೆ ಸೂಚಿಸಿದಂತೆ ಕಾಲಕಾಲಕ್ಕೆ ಸರಿಯಾಗಿ ಲಸಿಕೆಗಳನ್ನು ಹಾಕಿಸಿ ರಾಸುಗಳಿಗೆ ಬರುವ ಅನೇಕ ಕಾಯಿಲೆಗಳನ್ನು ತಡೆಯಬಹುದು ಎಂದು ತಿಳಿಸಿದರು.
ವೈದ್ಯಾಧಿಕಾರಿ ಸಿದ್ದರಾಜು ಮಾತನಾಡಿ, ಹಸುಗಳ ನಿರ್ವಹಣೆಯಲ್ಲಿ ರೈತರ ಮೊದಲ ವೈದ್ಯರಾಗಿದ್ದು, ಅನೇಕ ಮನೆ ಔಷಧಿಗಳಿಂದಲೇ ರಾಸುಗಳನ್ನು ನಿರ್ವಹಣೆ ಜತೆಗೆ ಆರೋಗ್ಯವಾಗಿ ಇರಿಸಿಕೊಳ್ಳುವುದರಿಂದ ಹೈನುಗಾರಿಕೆ ಸಂತತಿ ಉಳಿಸಿಕೊಳ್ಳಬಹುದು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಕೆ.ಬಿ.ಪ್ರವೀಣ್, ನಿರ್ದೇಶಕರಾದ ಅನುಸೂಯ, ರಮೇಶ್, ಪರಮೇಶ್ವರಪ್ಪ, ಪುಟ್ಟಸ್ವಾಮಿ, ಗಿರೀಶ್, ರವಿ, ಜಯಣ್ಣ, ಚನ್ನಬಸಮ್ಮ, ಕಾರ್ಯದರ್ಶಿ ಕಲ್ಲೇಶ್ ಇದ್ದರು.