ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರು ಗೃಹ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಯಾವುದೇ ಅವಹೇಳನಕಾರಿ ಪದ ಬಳಕೆ ಮಾಡಿಲ್ಲ. ಹೀಗಿದ್ದರೂ ಕಾಂಗ್ರೆಸ್ ನಾಯಕರು ಸಿ.ಟಿ.ರವಿ ವಿರುದ್ಧ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಗೃಹ ಸಚಿವರಾಗಿದ್ದಾಗಲೇ ಆರ್ ಎಸ್ ಎಸ್ ನಿಷೇಧಿಸಲು ಸಾಧ್ಯವಾಗಿಲ್ಲ. ಈಗ ಪ್ರಿಯಾಂಕ ಖರ್ಗೆ ಎಲ್ಲಿಂದ ನಿಷೇಧಿಸುತ್ತಾರೆ ಎಂಬ ಅರ್ಥದಲ್ಲಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಹೇಗೆ ಅವಹೇಳನಕಾರಿಯಾಗುತ್ತದೆ ಎಂದು ಪ್ರಶ್ನಿಸಿದರು.
ಆರ್ ಎಸ್ ಎಸ್ ಒಂದು ರಾಷ್ಟ್ರ ಭಕ್ತ, ಸಂಸ್ಕಾರವನ್ನು ಬಿತ್ತುವ, ದೇಶ ರಕ್ಷಣೆಗಾಗಿ ತ್ಯಾಗದ ಗುಣ ಬೆಳೆಸುವ ನಿಸ್ವಾರ್ಥ ಸೇವಾ ಸಂಸ್ಥೆ. ಅಂಬೇಡ್ಕರ್ ಅವರು ದೇಶಕ್ಕೆ ಕೊಟ್ಟಿರುವ ಸಂವಿಧಾನದ ಪ್ರಕಾರವೇ ಎಲ್ಲಾ ಸಂಘ ಸಂಸ್ಥೆಗಳು ನೋಂದಣಿ ಮಾಡಿಕೊಳ್ಳಬೇಕು ಎಂದಿಲ್ಲ. ಸರ್ಕಾರ ಅಥವಾ ಯಾವುದೇ ಸಂಘ ಸಂಸ್ಥೆಗಳಿಂದ ದೇಣಿಗೆಯನ್ನು ಪಡೆದುಕೊಳ್ಳುವ ಸಂಘ ಸಂಸ್ಥೆಗಳು ಕಡ್ಡಾಯವಾಗಿ ನೊಂದಣಿ ಮಾಡಿಕೊಳ್ಳಬೇಕು. ಆದರೆ ಆರ್ ಎಸ್ ಎಸ್ ಯಾವುದೇ ಸರ್ಕಾರ ಅಥವಾ ಸಂಘ ಸಂಸ್ಥೆಗಳಿಂದ ದೇಣಿಗೆ ಪಡೆಯುವುದಿಲ್ಲ. ಬಗ್ಗೆ ಗೃಹ ಸಚಿವರಿಗೆ ಸಾಮಾನ್ಯ ಪ್ರಜ್ಞೆ ಇಲ್ಲದಿರುವುದು ವಿಷಾದನೀಯ ಎಂದರು.
ಸಿ.ಟಿ.ರವಿ ಅವರು ಸ್ವಯಂಸೇವಕ ಸಂಘದಿಂದ ಸಂಸ್ಕಾರ ಕಲಿತಿದ್ದಾರೆ. ಎಲ್ಲಿ ಏನು ಮಾತನಾಡಬೇಕು? ಹೇಗೆ ವರ್ತಿಸಬೇಕು ಎಂಬ ಸಂಸ್ಕಾರ ಕರಗತ ಮಾಡಿಕೊಂಡಿದ್ದಾರೆ. ಅವರ ಜನಪ್ರಿಯತೆ ಸಹಿಸಿಕೊಳ್ಳಲಾರದೆ ಕಾಂಗ್ರೆಸ್ ನಾಯಕರು ಯಾರನ್ನೋ ಮೆಚ್ಚಿಸಬೇಕು ಎಂಬ ಉದ್ದೇಶದಿಂದ ಅರ್ಥಹೀನ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಬೇಡ್ಕರ್ ಅವರ ಜಪ ಮಾಡುವ ಕಾಂಗ್ರೆಸ್ 1952ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರನ್ನೇ ಸೋಲಿಸಿ ಅವಮಾನಿಸಿತ್ತು. ಅಂಬೇಡ್ಕರ್ ನಿಧನರಾದಾಗ ದೆಹಲಿಯಲ್ಲಿ ಅವರ ಅಂತ್ಯಸಂಸ್ಕಾರಕ್ಕೂ ಜಾಗ ನೀಡಿರಲಿಲ್ಲ. ಜೊತೆಗೆ ಭಾರತ ರತ್ನ ಪ್ರಶಸ್ತಿ ನೀಡದೆ ಅವಮಾನಿಸಲಾಗಿತ್ತು. ಇವೆಲ್ಲವನ್ನೂ ಮರೆಮಾಚುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಇದೀಗ ಅಂಬೇಡ್ಕರ್ ಅವರ ಜಪ ಮಾಡುತ್ತಿದೆ ಎಂದು ದೂರಿದರು.