ಗೋವು ಕಳ್ಳ ಸಾಗಣೆ ನಿರಂತರ

ಕೊಪ್ಪ ತಾಲೂಕಿನ ಕುಂಚೂರಿನಿಂದ ಅಕ್ರಮವಾಗಿ ಲಕ್ಕವಳ್ಳಿಗೆ ಸಾಗಿಸುತ್ತಿದ್ದ ಹಸುಗಳನ್ನು ರಕ್ಷಿಸುತ್ತಿರುವುದು.
ಕೊಪ್ಪ ತಾಲೂಕಿನ ಕುಂಚೂರಿನಿಂದ ಅಕ್ರಮವಾಗಿ ಲಕ್ಕವಳ್ಳಿಗೆ ಸಾಗಿಸುತ್ತಿದ್ದ ಹಸುಗಳನ್ನು ರಕ್ಷಿಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಬದಿ ಮಲಗಿದ್ದ ಬಿಡಾಡಿ ಜಾನುವಾರುಗಳು
  • ಸಾಕಲೆಂದು ಸುಳ್ಳು ಹೇಳಿ ತಂದಿದ್ದ 5 ಹಸುಗಳು

ಕೊಪ್ಪ: ತಾಲೂಕಿನಾದ್ಯಂತ ಅಕ್ರಮ ಗೋಸಾಗಣೆ ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆ ನಿರ್ಲಕ್ಷವೇ ಕಾರಣ ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಇತ್ತೀಚೆಗೆ ಬಪ್ಪುಂಜಿ ಕೈಮರದಲ್ಲಿ, ಮೇಲಿನಪೇಟೆಯಲ್ಲಿ ಮಲಗಿದ್ದ ಹಸುಗಳನ್ನು ಕಾರಿಗೆ ತುಂಬಿದ ವಿಡಿಯೋ ಹಾಗೂ ರಸ್ತೆ ಬದಿ ಮಲಗಿದ್ದ ಹಸುಗಳನ್ನು ಕಾರಿಗೆ ತುಂಬಿಸಿಕೊಂಡು ಪರಾರಿಯಾಗುತ್ತಿದ್ದ ವೇಳೆ ಬಜರಂಗದಳ ಕಾರ್ಯಕರ್ತರು ಬೆನ್ನಟ್ಟಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪೊಲೀಸರು ನೆಪ ಮಾತ್ರಕ್ಕೆ ಕೇಸ್ ದಾಖಲಿಸಿ ಕೈಕಟ್ಟಿ ಕುಳಿತ ಕಾರಣ ಅಕ್ರಮ ಗೋಸಾಗಣೆ ಸಾರ್ವಜನಿಕರ ನಿದ್ದೆಗೆಡಿಸಿದೆ.

ರಸ್ತೆ ಬದಿ ಮಲಗಿದ್ದ ಬಿಡಾಡಿ ಜಾನುವಾರುಗಳು, ಕೊಟ್ಟಿಗೆಯಲ್ಲಿದ್ದ ಜಾನುವಾರುಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ರೈತರು ಮೇಯಲು ಬಿಟ್ಟ ಹಸುಗಳನ್ನು ಸ್ಥಳೀಯರೇ ಕದ್ದು ರಾತ್ರಿ ವೇಳೆ ಶಿವಮೊಗ್ಗ, ಭದ್ರಾವತಿಗೆ ಸಾಗಿಸಿ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಹೊರ ಬಿದ್ದಿದೆ.

ರೈತರು ಮೇಯಲು ಬಿಟ್ಟಿದ್ದ ಜಾನುವಾರುಗಳನ್ನು ಕದ್ದ ಹಾಗೂ ಸಾಕಲೆಂದು ಸುಳ್ಳು ಹೇಳಿ ತಂದಿದ್ದ 5 ಹಸುಗಳು ಲಕ್ಕವಳ್ಳಿಗೆ ಮಂಗಳವಾರ ಬೆಳಗಿನಜಾವ 5 ಗಂಟೆ ಸುಮಾರಿಗೆ ಸಾಗಿಸುವಾಗ ಹಿಂದೂ ಪರ ಸಂಘಟನೆಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 5 ಹಸುಗಳನ್ನು ರಕ್ಷಣೆ ಮಾಡಿದ್ದಾರೆ. ಹಾಗೂ ಲಕ್ಕವಳ್ಳಿ ವಾಹನ ವಶಕ್ಕೆ ಪಡೆದು ಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಕ್ಕವಳ್ಳಿ ಆರ್.ವಂಶಿ ಹಾಗೂ ಯು.ಪ್ರಜ್ವಲ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಹಸುಗಳನ್ನು ಕಡಿದು ಕುರಿ ಮಾಂಸದ ಜತೆಯಲ್ಲಿ ಮಿಶ್ರಣ ಮಾಡಿ ಮಾರಾಟ ಮಾಡಲಾಗುತ್ತದೆ ಎಂದು ಬಂಧಿತ ಆರೋಪಿಗಳು ಹೇಳಿದ್ದಾರೆಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net