ಶೃಂಗೇರಿ: ರಾಜ್ಯ ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಹೊಸ ಮಾನದಂಡಗಳನ್ನು ಜಾರಿಗೆ ತಂದಿರುವ ಪರಿಣಾಮ ಆರು ತಿಂಗಳಿನಿಂದ ಸಾವಿರಾರು ಅರ್ಹ ವೃದ್ಧರು ವೃದ್ಧಾಪ್ಯ ವೇತನದಿಂದ ವಂಚಿತರಾಗಿದ್ದಾರೆ ಎಂದು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಭರತ್ ಗಿಣಿಕಲ್ ಆರೋಪಿಸಿದರು.
ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ವೈಫಲ್ಯಗಳನ್ನು ವಿರೋಧಿಸಿ ಜೆಡಿಎಸ್‌ನಿಂದ ತಾಲೂಕು ಕಚೇರಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು. ವೃದ್ಧಾಪ್ಯ ವೇತನಕ್ಕೆ ಬಿಪಿಎಲ್ ಕಾರ್ಡ್ ಮತ್ತು ಆದಾಯ ದೃಢೀಕರಣ ಪತ್ರ ಮಾನದಂಡವನ್ನಾಗಿ ಪರಿಗಣಿಸಿ ಅರ್ಹರಿಗೆ ಯಾವುದೇ ತೊಂದರೆಯಿಲ್ಲದೆ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಪತಿಯನ್ನು ಕಳೆದುಕೊಂಡು ಮಾನಸಿಕ ನೋವು ಹಾಗೂ ಆರ್ಥಿಕ ಸಂಕಷ್ಟದ ನಡುವೆ ಜೀವನ ಸಾಗಿಸುತ್ತಿರುವ ಮಹಿಳೆಯರು ಸ್ವಾಭಿಮಾನದಿಂದ ಬದುಕಲು ಅನುಕೂಲವಾಗಿದ್ದ ವಿಧವಾ ವೇತನಕ್ಕೂ ಹೊಸ ಮಾನದಂಡ ಜಾರಿಗೊಳಿಸಿದ್ದರಿಂದ ಅನೇಕ ಫಲಾನುಭವಿಗಳು ವಂಚಿತರಾಗಿದ್ದಾರೆ ಎಂದು ದೂರಿದರು.
ಜೆಡಿಎಸ್ ತಾಲೂಕು ಘಟಕದ ಉಪಾಧ್ಯಕ್ಷ ಗಂಡಘಟ್ಟ ಶ್ರೀಧರ್ ಮಾತನಾಡಿ, ಅಂಗವಿಕಲರು ವೇತನಕ್ಕೂ ರಾಜ್ಯ ಸರ್ಕಾರ ಕತ್ತರಿ ಹಾಕುತ್ತಿದೆ. ಅಂಗವಿಕಲರ ವೇತನಕ್ಕೆ ವಾರ್ಷಿಕ 32 ಸಾವಿರ ರೂ. ಆದಾಯ ಮಿತಿ ನಿಗದಿಪಡಿಸಿರುವುದು ದುರದೃಷ್ಟಕರ ಎಂದರು.