ವಾಹನ ಸವಾರರಿಗೆ ಕಂಟಕವಾದ ಕಂಟೈನರ್

ಕಳಸ-ಹೊರನಾಡು ಮುಖ್ಯರಸ್ತೆಯ ಹೆಬ್ಬಾಳೆ ಎಂಬಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿರುವ ಕಂಟೈನರ್.
ಕಳಸ-ಹೊರನಾಡು ಮುಖ್ಯರಸ್ತೆಯ ಹೆಬ್ಬಾಳೆ ಎಂಬಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿರುವ ಕಂಟೈನರ್.
Published on
ಕಳಸ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಕಳಸ-ಹೊರನಾಡು ಮುಖ್ಯ ರಸ್ತೆಯ ಹೆಬ್ಬಾಳೆ ಎಂಬಲ್ಲಿ ರಸ್ತೆ ಬದಿಯಲ್ಲಿ ಅನಾಥವಾಗಿರುವ ಬೃಹತ್ ಕಂಟೈನರ್ ವಾಹನ ಸವಾರರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನಕ್ಕೆ ಈ ಕಂಟೈನರ್ ಜೀವಂತ ಸಾಕ್ಷಿಯಾಗಿದೆ.
ಎರಡು ವರ್ಷದ ಹಿಂದೆ ಹೆಬ್ಬಾಳೆಯಲ್ಲಿ ಹೊಸ ಸೇತುವೆ ನಿರ್ಮಾಣ ಮಾಡುವಾಗ ಸಿಮೆಂಟ್ ಸೇರಿದಂತೆ ಇತರೆ ಸಾಮಗ್ರಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಬೃಹತ್ ಕಂಟೈನರ್‌ನ್ನು ತಂದು ರಸ್ತೆ ಬದಿಯಲ್ಲಿ ಇಡಲಾಗಿತ್ತು. ಆದರೆ, ಈಗ ಸೇತುವೆ ಕಾಮಗಾರಿ ಮುಗಿದು ಬರೋಬ್ಬರಿ ಒಂದು ವರ್ಷ ಕಳೆದಿದೆ. ಕಾಮಗಾರಿ ಮುಗಿದ ತಕ್ಷಣ ಈ ಕಂಟೈನರನ್ನು ಇಲ್ಲಿಂದ ತೆರವುಗೊಳಿಸುವುದು ಗುತ್ತಿಗೆದಾರರ ಕರ್ತವ್ಯವಾಗಿತ್ತು. ಆದರೆ, ವರ್ಷ ಕಳೆದರೂ ಇದನ್ನು ಸ್ಥಳಾಂತರಿಸುವ ಮನಸ್ಸು ಮಾಡಿಲ್ಲ.
ಈ ಕಂಟೈನರ್‌ನ್ನು ಅಪಾಯಕಾರಿ ಕಡಿದಾದ ತಿರುವು ಮತ್ತು ಕಡಿದಾದ ಇಳಿಜಾರು ಪ್ರದೇಶದ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದೆ. ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಗೆ ನಿತ್ಯವೂ ನೂರಾರು ಪ್ರವಾಸಿ ವಾಹನಗಳು, ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ಸ್ಥಳೀಯ ವಾಹನಗಳು ಇದೇ ರಸ್ತೆಯಲ್ಲೇ ಸಂಚರಿಸುತ್ತವೆ. ತಿರುವಿನಲ್ಲಿ ಎದುರಿನಿಂದ ಬರುವ ವಾಹನಗಳು ಚಾಲಕರಿಗೆ ಸರಿಯಾಗಿ ಕಾಣಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ದೈತ್ಯ ಕಂಟೈನರ್ ರಸ್ತೆಯ ಬಹುಭಾಗವನ್ನು ಆಕ್ರಮಿಸಿಕೊಂಡಿರುವುದರಿಂದ ಎದುರು ಬರುವ ವಾಹನಗಳಿಗೆ ಪರಸ್ಪರ ಸೈಡ್ ಕೊಡಲು ಜಾಗ ಇಲ್ಲದಂತಾಗಿದೆ.
ಇಳಿಜಾರು ಪ್ರದೇಶವಾಗಿರುವುದರಿಂದ ವಾಹನ ನಿಯಂತ್ರಿಸುವುದು ಕಷ್ಟಸಾಧ್ಯ. ಒಮ್ಮೆ ವಾಹನಗಳು ಮುಖಾಮುಖಿಯಾದರೆ ಹಿಂದೆ-ಮುಂದೆ ಚಲಿಸಲೂ ಜಾಗವಿಲ್ಲದೆ ಗಂಟೆಗಟ್ಟಲೆ ಕೃತಕ ಟ್ರಾಫಿಕ್‌ಜಾಮ್ ಉಂಟಾಗುತ್ತಿದ್ದು, ವಾಹನ ಸವಾರರು ಪ್ರತಿನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ. ಈ ಕಂಟೈನರ್ ರಸ್ತೆ ಬದಿ ಚರಂಡಿಗೆ ತೀರಾ ಹೊಂದಿಕೊಂಡಂತೆ ಇರುವುದರಿಂದ ಮತ್ತೊಂದು ದೊಡ್ಡ ಆಪತ್ತು ಸೃಷ್ಟಿಯಾಗಿದೆ.
ಮಳೆಗಾಲದಲ್ಲಿ ಚರಂಡಿಯಲ್ಲಿ ಹರಿದು ಹೋಗಬೇಕಾದ ಮಳೆ ನೀರು ಕಂಟೈನರ್ ಅಡ್ಡಿಯಾಗಿರುವುದರಿಂದ ಸರಾಗವಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ರಸ್ತೆ ಮೇಲೆ ನಿರಂತರವಾಗಿ ನೀರು ಹರಿಯುತ್ತಿರುವುದರಿಂದ ಡಾಂಬರ್ ಕಿತ್ತುಹೋಗಿ ರಸ್ತೆ ಕೊರೆತ ಉಂಟಾಗುತ್ತಿದೆ. ಸರ್ಕಾರ ಕೋಟ್ಯಂತರ ರೂ.ವೆಚ್ಚ ಮಾಡಿ ನಿರ್ಮಿಸಿದ ರಸ್ತೆ, ಕೇವಲ ಒಂದು ಕಂಟೈನರ್‌ನಿಂದ ಹಾಳಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net