ಬುರುಡೆ ಪ್ರಕರಣದ ಷಡ್ಯಂತ್ರ ಬಯಲು

ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ
ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ
Published on

ಪ್ರಮುಖ ಮುಖ್ಯಾಂಶಗಳು

  • ಧಾರ್ಮಿಕ ಕೇಂದ್ರದ ಬಗ್ಗೆ ಅಪನಂಬಿಕೆ ಹುಟ್ಟಿಸುವುದೇ ಷಡ್ಯಂತ್ರದ ಸಂಚಿನ ಭಾಗ
  • ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಆಕ್ರೋಶ
ಚಿಕ್ಕಮಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ ಷಡ್ಯಂತ್ರ ಇದೀಗ ಬಯಲಾಗಿದೆ. ಧಾರ್ಮಿಕ ಕೇಂದ್ರದ ಬಗ್ಗೆ ಅಪನಂಬಿಕೆ ಹುಟ್ಟಿಸುವುದೇ ಈ ಷಡ್ಯಂತ್ರದ ಸಂಚಿನ ಭಾಗವಾಗಿತ್ತು. ಅಲ್ಲದೆ ವೀರೇಂದ್ರ ಹೆಗ್ಗಡೆ ಅವರ ಕುಟುಂಬಕ್ಕೆ ಅಗೌರವ ತರುವ ದೊಡ್ಡ ಹುನ್ನಾರವು ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕ್ಸಲರನ್ನು ಬೆಂಬಲಿಸುವ, ಅರಾಜಕತೆಯನ್ನೇ ಉಸಿರಾಗಿಸಿಕೊಂಡಿರುವ ವ್ಯಕ್ತಿ ಷಡ್ಯಂತ್ರದಲ್ಲಿ ಪಾಲುದಾರನಾಗಿದ್ದಾನೆ ಎನ್ನುವ ಮಾಹಿತಿ ಇದೆ. ಸರ್ಕಾರಕ್ಕೆ ಪ್ರಾಮಾಣಿಕತೆ ಇದ್ದರೆ ಕೂಡಲೇ ಈ ಬಗ್ಗೆ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಯಾವ ಉದ್ದೇಶದಿಂದ ಬುರುಡೆ ಪ್ರಕರಣದ ಷಡ್ಯಂತ್ರ ರೂಪಿಸಿದ್ದರು. ಜೊತೆಗೆ ವೀರೇಂದ್ರ ಹೆಗ್ಗಡೆ ಅವರ ಕುಟುಂಬದ ಮೇಲೆ ಯಾವ ಕಾರಣಕ್ಕೆ ಅಪಪ್ರಚಾರ ನಡೆಸಿದರು ಎಂಬ ಬಗ್ಗೆಯೂ ತನಿಖೆ ನಡೆಯಬೇಕು ಎಂದರು.
ಬುರುಡೆ ಪ್ರಕರಣದಲ್ಲಿ ಭಾಗಿಯಾಗಿದ್ದವರನ್ನು ಎಲ್ಲಿ ಇಡಬೇಕಿತ್ತೋ ಅಲ್ಲಿ ಇಡಬೇಕಿತ್ತು. ಆದರೆ ಅವರನ್ನು ಚುನಾವಣಾ ಪ್ರಚಾರದಲ್ಲಿ ಬಳಕೆ ಮಾಡಿಕೊಂಡರು. ಅಂತ ವ್ಯಕ್ತಿಗಳ ವಿರುದ್ಧ ಸರ್ಟಿಫಿಕೇಟ್ ಕೊಡುವ ಕೆಲಸವನ್ನು ಗೃಹ ಸಚಿವರು ಮಾಡಬಾರದು. ತನಿಖೆ ನಡೆಯುವ ಮೊದಲೇ ಸರ್ಟಿಫಿಕೇಟ್ ನೀಡಿದರೆ ಗೃಹ ಸಚಿವರು ಪಕ್ಷಪಾತಿಗಳಾಗುತ್ತಾರೆ. ಜೊತೆಗೆ ಧರ್ಮಸ್ಥಳ ಪ್ರಕರಣವನ್ನು ಮುಚ್ಚಿ ಹಾಕುವ ಮನಸ್ಥಿತಿ ಸರ್ಕಾರಕ್ಕೆ ಇದೆ ಎಂಬ ಭಾವನೆ ಜನರಲ್ಲಿ ಬರುತ್ತದೆ ಎಂದು ಎಚ್ಚರಿಸಿದರು.
ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಅವರ ಕುಟುಂಬದ ಮೇಲೆ ಷಡ್ಯಂತ್ರ ನಡೆಸಿರುವುದು ಒಳ್ಳೆಯ ಕೆಲಸವೇ ಎಂದು ಪ್ರಶ್ನಿಸಿದ ಅವರು, ಕೋಟ್ಯಂತರ ಜನರ ನಂಬಿಕೆಯ ಶ್ರದ್ಧಾ ಕೇಂದ್ರದ ಮೇಲೆ ಅಪಪ್ರಚಾರ ಮಾಡುವುದು ಒಳ್ಳೆಯ ಕೆಲಸ ಎಂದು ಗೃಹ ಸಚಿವರು ಸರ್ಟಿಫಿಕೇಟ್ ಕೊಡುತ್ತಾರಾ?. ಹೀಗೆ ಸರ್ಟಿಫಿಕೇಟ್ ಕೊಡುವ ಮೊದಲು ತಾವು ಒಬ್ಬ ಗೃಹ ಸಚಿವರು ಎಂಬ ಪ್ರಜ್ಞೆ ಇರಬೇಕು ಎಂದು ಹೇಳಿದರು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಇನ್ನೊಂದು ಆಯಾಮದಲ್ಲಿ ತನಿಖೆ ನಡೆಸಬೇಕು. ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಕುಟುಂಬದ ವಿರುದ್ಧ ಏಕೆ ಷಡ್ಯಂತ್ರ ಮಾಡಿದರು. ಇದಕ್ಕೆ ಫಂಡಿಂಗ್ ಎಲ್ಲಿಂದ ಬಂತು ಎಂಬ ಬಗ್ಗೆಯೂ ತನಿಖೆಯಾಗಬೇಕು. ಈ ಷಡ್ಯಂತ್ರದ ಹಿಂದೆ ಮತಾಂತರ ಮಾಫಿಯಾ ಇದೆಯೇ?, ಶ್ರದ್ಧಾ ಕೇಂದ್ರಗಳನ್ನು ಟಾರ್ಗೆಟ್ ಮಾಡಿದ್ದರೆ ಎಂಬ ಬಗ್ಗೆಯೂ ತನಿಖೆಯಾಗಬೇಕು. ಸರ್ಕಾರದ ನೇತೃತ್ವದ ಸಮಗ್ರ ತನಿಖೆಯಿಂದ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net