ಕೈಕೈ ಮಿಲಾಯಿಸಲು ಮುಂದಾದ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರು

ಚಿಕ್ಕಮಗಳೂರು ಹೊರವಲಯದ ರಾಂಪುರ ಬಳಿ ಸಿ.ಟಿ.ರವಿ, ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ನೂಕಾಟ, ತಳ್ಳಾಟ ತಡೆಯಲು ಪ್ರಯತ್ನಿಸುತ್ತಿರುವ ಪೊಲೀಸರು.
ಚಿಕ್ಕಮಗಳೂರು ಹೊರವಲಯದ ರಾಂಪುರ ಬಳಿ ಸಿ.ಟಿ.ರವಿ, ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ನೂಕಾಟ, ತಳ್ಳಾಟ ತಡೆಯಲು ಪ್ರಯತ್ನಿಸುತ್ತಿರುವ ಪೊಲೀಸರು.
Published on

ಪ್ರಮುಖ ಮುಖ್ಯಾಂಶಗಳು

  • ಅನುದಾನ ಮಂಜೂರಾತಿ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಳ್ಳಾಟ
  • ರಾಂಪುರದ ರಸ್ತೆ ಅಭಿವೃದ್ಧಿ ಕಾಮಗಾರಿ ವಿಚಾರ
ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಅನುದಾನ ಮಂಜೂರಾತಿ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ ನಡೆದಿದ್ದು, ನಡು ರಸ್ತೆಯಲ್ಲಿ ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡ ಘಟನೆ ಗುರುವಾರ ನಡೆದಿದೆ.
ನಗರದ ಹೊರ ವಲಯದ ರಾಂಪುರದ ರಸ್ತೆ ಅಭಿವೃದ್ಧಿ ಕಾಮಗಾರಿ ವಿಚಾರವಾಗಿ ಶಾಸಕ ಎಚ್.ಡಿ.ತಮ್ಮಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ನಡುವೆ ಜಟಾಪಟಿ ನಡೆಯುತ್ತಿದೆ. ಒಂದೆರಡು ದಿನಗಳ ಹಿಂದೆ ಶಾಸಕ ಎಚ್.ಡಿ.ತಮ್ಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಗುರುವಾರ ಕಾಮಗಾರಿ ವೀಕ್ಷಣೆಗೆ ಸಿ.ಟಿ.ರವಿ ಅವರು ತೆರಳಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ.ರವಿ ಅವರನ್ನು ಅಡ್ಡಗಟ್ಟಿ ಬಿಜೆಪಿ ಹಾಗೂ ಸಿ.ಟಿ.ರವಿ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಜತೆಗೆ ಕಳೆದ ೨೦ ವರ್ಷಗಳಿಂದ ಶಾಸಕರಾಗಿದ್ದ ಅವಧಿಯಲ್ಲಿ ರಸ್ತೆ ಅಭಿವೃದ್ಧಿ ಮಾಡಲಿಲ್ಲ. ಈಗ ಕಾಂಗ್ರೆಸ್ ಶಾಸಕ ಎಚ್.ಡಿ.ತಮ್ಮಯ್ಯ ಅವರ ಆಸಕ್ತಿಯಿಂದ ಕಾಮಗಾರಿ ನಡೆಸಲು ಕಾರ್ಯಾದೇಶವಾಗಿದೆ. ಈಗಲೂ ಕಾಮಗಾರಿ ಆರಂಭಿಸಲು ವಿಳಂಬ ಮಾಡಲಾಗುತ್ತಿದೆ. ಇದಕ್ಕೆ ಸಿ.ಟಿ.ರವಿ ಅವರೇ ಕಾರಣ ಎಂದು ಆರೋಪಿಸಿದರು.
ಕಾಮಗಾರಿಗೆ ಅನುಮೋದನೆಗೆ ಸಂಬAಧಿಸಿದAತೆ ದಾಖಲೆಗಳೊಂದಿಗೆ ಆಗಮಿಸಿದ್ದ ಸಿ.ಟಿ.ರವಿ ಅವರು, ಈ ಕಾಮಗಾರಿಗೆ ಮಂಜೂರಾತಿ ಕೊಡಿಸಿರುವುದು ನಾನೇ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾತಿ ಸಿಕ್ಕಿದೆ. ಆದರೆ ಕಾಮಗಾರಿ ವಿಳಂಬಕ್ಕೆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮತ್ತು ಶಾಸಕರು ಕಾರಣವಾಗಿದ್ದಾರೆ. ೨೦೨೨ರಲ್ಲಿ ಮಂಜೂರಾಗಿದ್ದ ಕಾಮಗಾರಿಗೆ ಈಗ ಕಾರ್ಯಾದೇಶ ನೀಡಲಾಗಿದೆ. ಹೀಗಾಗಿ ವಿಳಂಬವಾಗಿದೆ ಎಂದು ಸಿ.ಟಿ.ರವಿ ಹೇಳಿದರು.
ಸಿ.ಟಿ.ರವಿ ಅವರನ್ನು ಅಡ್ಡಗಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಪರಸ್ಪರ ಧಿಕ್ಕಾರ ಕೂಗಿದರು. ನೂಕಾಟ, ತಳ್ಳಾಟದ ನಡುವೆ ಕೈ ಕೈ ಮಿಲಾಯಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಇರಡೂ ಕಡೆಯ ಕಾರ್ಯಕರ್ತರ ನಡುವೆ ನಿಂತು ಪರಿಸ್ಥಿತಿ ನಿಭಾಯಿಸಲು ಹರ ಸಾಹಸ ಪಡಬೇಕಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net