ಕೊಪ್ಪದ ತಾಲೂಕು ಕಚೇರಿ ಮುಂಭಾಗದಲ್ಲಿ ಜೆಡಿಎಸ್ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
Published on:
Copied
Follow Us
ಕೊಪ್ಪ: ವೃದ್ಧಾಪ್ಯ, ಅಂಗವಿಕಲ ವೇತನ ಹಾಗೂ ವಿಧವಾ ವೇತನ ಪಡೆಯಲು ರಾಜ್ಯಸರ್ಕಾತ ಗರಿಷ್ಠ 32 ಸಾವಿರ ರೂ. ಆದಾಯ ಮಿತಿ ನಿಗದಿಪಡಿಸಿರುವುದನ್ನು ಖಂಡಿಸಿ ಶೃಂಗೇರಿ ಕ್ಷೇತ್ರ ಜೆಡಿಎಸ್ ಸಮಿತಿ ಜೆಡಿಎಸ್ ಕಚೇರಿಯಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ ಎಸ್.ಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರ ಆರ್ಥಿಕ ದುಸ್ಥಿತಿಗೆ ತಲುಪಿದೆ. ಇದರಿಂದ ಇಲ್ಲ ಸಲ್ಲದ ಷರತ್ತುಗಳನ್ನು ಹಾಕಿ ಬಡವರಿಗೆ ನೀಡುತ್ತಿದ್ದ ಪಿಂಚಣಿ ಕಿತ್ತುಕೊಳ್ಳುವ ಹುನ್ನಾರ ನಡೆಸಿದೆ. ಗಂಡನನ್ನು ಕಳೆದುಕೊಂಡ ಮಹಿಳೆಯರು, ಅಂಗವಿಕಲರು, ವಯಸ್ಸಾದವರು ಅನಾಥರಾಗಬಾರದು ಎಂದು ಈ ಹಿಂದಿನ ಎಲ್ಲ ಸರ್ಕಾರಗಳು ಮಾಸಿಕ ಪಿಂಚಣಿ ನೀಡಿ ಅವರಿಗೆ ಆರ್ಥಿಕ ಬೆಂಬಲ ನೀಡುತ್ತಿವೆ. ಆದರೆ ರಾಜ್ಯ ಸರ್ಕಾರ 2.97 ಲಕ್ಷ ಪಿಂಚಣಿದಾರರಿಗೆ ನೈಜತೆ ಪರಿಶೀಲನೆ ನೆಪದಲ್ಲಿ ನೋಟಿಸ್ ನೀಡಿದೆ ಎಂದು ದೂರಿದರು.
ನೋಟಿಸ್‌ನಲ್ಲಿ ನೀಡಿರುವ ದಾಖಲೆಗಳನ್ನು ಪಿಂಚಣಿದಾರರು ನೀಡಲು ಸಾಧ್ಯವಿಲ್ಲ. ಈ ಮೂಲಕ ಆರ್ಥಿಕವಾಗಿ ದುರ್ಬಲರಾಗಿರುವವರ ಬದುಕಿಗೆ ಆಸರೆಯಾದ ಪಿಂಚಣಿ ನಿಲ್ಲಿಸುವ ಹುನ್ನಾರ ನಡೆಸಿದೆ. ರಾಜ್ಯದಲ್ಲಿರುವುದು ಲೇಔಟ್ ನಿರ್ಮಾಣದ ಸರ್ಕಾರ ಹಾಗೂ ಭ್ರಷ್ಟಚಾರದ ಸರ್ಕಾರ. ರಿಯಲ್ ಎಸ್ಟೇಟ್ ಯೋಜನೆಗಳಿಗಾಗಿಯೇ ಬಡವರ ಹಣ ಕಿತ್ತುಕೊಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಜೆಡಿಎಸ್ ಕ್ಷೇತ್ರ ಸಂಚಾಲಕ ಕಳಸಪ್ಪ ಮಾತನಾಡಿ, ಬಿಪಿಎಲ್ ಕಾಡ್‌ಗಳನ್ನು ಮಾಸಿಕ ಪಿಂಚಣಿ ಯೋಜನೆಗಳಿಗೆ ಮಾನದಂಡವಾಗಿ ಪರಿಗಣಿಸಬೇಕು. 32 ಸಾವಿರ ರೂ. ಆದಾಯದ ಮಿತಿ ನಿಗದಿಪಡಿಸಿರುವುದು ಸರಿಯಲ್ಲ. ಈ ಮೂಲಕ ಬಡ ಫಲಾನುಭವಿಗಳ ಜತೆಗೆ ಅಧಿಕಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ಜೆಡಿಎಸ್ ಕ್ಷೇತ್ರ ಉಪಾಧ್ಯಕ್ಷ ವಾಸಪ್ಪ, ತಾಲೂಕು ಅಧ್ಯಕ್ಷ ರಾಮಸ್ವಾಮಿ, ಪ್ರಮುಖರಾದ ಶಾಂತಕುಮಾರ್ ಜೈನ್, ವಿಶ್ವ ,ಮಂಜುನಾಥ್, ಅನಿಲ್ ಇತರರಿದ್ದರು.