ವಿರೋಧಿ ಬಣದ ವಿರುದ್ಧ ಸಿಎಂ, ಕೆಪಿಸಿಸಿ ಅಧ್ಯಕ್ಷರಿಗೆ ದೂರು

ಬೆಂಗಳೂರಿನಲ್ಲಿ ಶಾಸಕಿ ನಯನಾ ಮೋಟಮ್ಮ ಮತ್ತು ಬೆಂಬಲಿಗರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಮುದಬೀರ್, ಶ್ರೇಣಿಕ್, ಕೆ.ವೆಂಕಟೇಶ್, ಸುಬ್ರಾಯ ಗೌಡ, ಹೊಸಕೆರೆ ರಮೇಶ್, ಸಿ.ಬಿ.ಶಂಕರ್, ದೀಕ್ಷಿತ್ ಕಣಚೂರು ಇತರರಿದ್ದರು.
ಬೆಂಗಳೂರಿನಲ್ಲಿ ಶಾಸಕಿ ನಯನಾ ಮೋಟಮ್ಮ ಮತ್ತು ಬೆಂಬಲಿಗರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಮುದಬೀರ್, ಶ್ರೇಣಿಕ್, ಕೆ.ವೆಂಕಟೇಶ್, ಸುಬ್ರಾಯ ಗೌಡ, ಹೊಸಕೆರೆ ರಮೇಶ್, ಸಿ.ಬಿ.ಶಂಕರ್, ದೀಕ್ಷಿತ್ ಕಣಚೂರು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಂಬಲಿಗರೊಂದಿಗೆ
  • ಶಾಸಕಿ ನಯನಾ ಮೋಟಮ್ಮ ವಿವರಣೆ
ಮೂಡಿಗೆರೆ: ಶಾಸಕಿ ನಯನಾ ಮೋಟಮ್ಮ ವಿರುದ್ಧ ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡಿದ ಬೆನ್ನಲ್ಲೇ ಶಾಸಕಿ ಹಾಗೂ ಅವರ ಬೆಂಬಲಿಗರು ವಿರೋಧಿ ಬಣದ ವಿರುದ್ಧ ಗಂಭೀರ ಆರೋಪ ಮಾಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಬಿ.ಕೆ.ಹರಿಪ್ರಸಾದ್ ಅವರಿಗೆ ಶುಕ್ರವಾರ ದೂರು ನೀಡಿದ್ದಾರೆ.
ಹಿರಿಯ ಕಾಂಗ್ರೆಸಿಗರೆನಿಸಿಕೊಂಡಿರುವ ಕೆಲವರಿಂದ ನಯನಾ ಮೋಟಮ್ಮ ವಿರುದ್ಧ ದಬ್ಬಾಳಿಕೆ ನಡೆಯುತ್ತಿದೆ. ಹಿರಿಯ ಕಾಂಗ್ರೆಸ್ ಮುಖಂಡರಿಂದ ಪಕ್ಷಕ್ಕಾಗಲಿ, ಕ್ಷೇತ್ರಕ್ಕಾಗಲಿ ಲಾಭವಿಲ್ಲ. ಅವರೆಲ್ಲರೂ ವೈಟ್ ಕಾಲರ್ ರಾಜಕಾರಣಿಗಳು. ಕಾರ್ಯಕರ್ತರೊಂದಿಗೆ ಸಂಪರ್ಕ ಇಟ್ಟುಕೊಂಡಿಲ್ಲ. ಎರಡು ದಶಕಗಳಿಂದ ಕಾಂಗ್ರೆಸ್ ಸೋಲಲು ಈ ಮುಖಂಡರ ನಿಷ್ಕ್ರಿಯತೆ ಮತ್ತು ದುರಹಂಕಾರವೇ ಕಾರಣ. ಕಾಂಗ್ರೆಸ್ ಗೆದ್ದ ಬಳಿಕ ಅವರ ಚಾಳಿ ಮುಂದುವರಿಸಿದ್ದಾರೆ ಎಂದು ಶಾಸಕಿಯ ಬೆಂಬಲಿಗರು ಆರೋಪಿಸಿದ್ದಾರೆ.
ಬಿಜೆಪಿಯಿಂದ ವಲಸೆ ಬಂದಿರುವ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಜೆಡಿಎಸ್‌ನಿಂದ ವಲಸೆ ಬಂದಿರುವ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅವರೂ ಹಿರಿಯ ಕಾಂಗ್ರೆಸ್ ಮುಖಂಡರೊಂದಿಗೆ ಸೇರಿಕೊಂಡಿದ್ದಾರೆ. ನಯನಾ ಮೋಟಮ್ಮ ವಿರುದ್ಧ ಕೆಪಿಸಿಸಿಗೆ ಸುಳ್ಳು ದೂರು ನೀಡಿದ್ದಾರೆ. ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು, ಇದಕ್ಕಾಗಿ ತಳಮಟ್ಟದಿಂದ ಪಕ್ಷದ ಸಂಘಟನೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. 
ನಿಯೋಗದಲ್ಲಿ ಶಾಸಕಿ ನಯನಾ ಮೋಟಮ್ಮ, ಆಲ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಬೀರ್, ಕಳಸ ಬ್ಲಾಕ್ ಅಧ್ಯಕ್ಷ ಶ್ರೇಣಿಕ್, ಗೋಣಿಬೀಡು ಹೋಬಳಿ ಅಧ್ಯಕ್ಷ ಸುಬ್ರಾಯ ಗೌಡ, ಕಸಬಾ ಹೋಬಳಿ ಅಧ್ಯಕ್ಷ ಸಿ.ಬಿ.ಶಂಕರ್, ಕೆ.ವೆಂಕಟೇಶ್, ಹೊಸಕೆರೆ ರಮೇಶ್, ಕೆ.ಎಸ್.ನಾರಾಯಣ, ನಿಶಾಂತ್ ಪಟೇಲ್, ಇಬ್ರಾಹಿಂ ಆಲ್ದೂರು, ಯೋಗೀಶ್, ದೀಕ್ಷಿತ್ ಕಣಚೂರು, ರಫೀಕ್, ಅಬ್ರಾರ್ ಅಹಮದ್, ಯಾಕೂಬ್ ಗೋಣಿಗದ್ದೆ, ಸುರೇಂದ್ರ, ಸುಧೀರ್ ಚಕ್ರಮಣಿ, ಬಿ.ಕೆ.ಜಯಮ್ಮ, ಕುನ್ನಳ್ಳಿ ರವಿ, ಫಿಶ್ ಮೋಣು, ಜಾನಕಿ, ಖಾಲಿದ್, ಬಿ.ಕೆ.ಚಂದ್ರಶೇಖರ್, ಕೆ.ಟಿ.ಜಗದೀಶ್, ಹರೀಶ್ ಸಬ್ಬೇನಹಳ್ಳಿ ಇತರರಿದ್ದರು.
ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಕಚೇರಿ ಕಟ್ಟಡವನ್ನು ಹಿಂದಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಎಚ್.ಹೇಮಶೇಖರ್ ಅವರ ಹೆಸರಿನಲ್ಲಿ ಕರಾರು ಮಾಡಿಕೊಂಡಿದ್ದಾರೆ. ಅಲ್ಲಿ 7 ಅಂಗಡಿಗಳಿವೆ. ಎಲ್ಲವನ್ನೂ ಬಿಜೆಪಿ ಕಾರ್ಯಕರ್ತರಿಗೆ ಬಾಡಿಗೆಗೆ ನೀಡಿದ್ದಾರೆ. ಮಾಸಿಕ 70 ಸಾವಿರ ರೂ. ಬಾಡಿಗೆ ಪಡೆಯುತ್ತಿದ್ದಾರೆ. ಅದರ ಲೆಕ್ಕ ಕೊಡುತ್ತಿಲ್ಲ. ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ. ಆ ಕಚೇರಿಗೆ ಹೋಗಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿದ್ದರಿಂದ ನಯನಾ ಮೋಟಮ್ಮ ಅವರು ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಹೋಗುತ್ತಿಲ್ಲ. ಮೂಡಿಗೆರೆ ಸಮೀಪದ ಸುಶಾಂತ್ ನಗರದಲ್ಲಿ ಶಾಸಕರು ಕಚೇರಿ ತೆರೆದಿದ್ದಾರೆ. ಸೋಮವಾರದಿಂದ ಗುರುವಾರದವರೆಗೆ ಸಾರ್ವಜನಿಕರು ಕಚೇರಿಗೆ ಭೇಟಿ ನೀಡಲು ಅವಕಾಶ ಮಾಡಲಾಗಿದೆ. ಮೂಡಿಗೆರೆ, ಆಲ್ದೂರು, ಕಳಸ ಬ್ಲಾಕ್‌ಗೆ ಪ್ರತ್ಯೇಕ ಆಪ್ತ ಸಹಾಯಕರನ್ನು ನೇಮಿಸಲಾಗಿದೆ. ಶಾಸಕಿ ನಯನಾ ಮೋಟಮ್ಮ ಹಿರಿಯ ನಾಯಕರನ್ನು ಕಡೆಗಣಿಸಿಲ್ಲ. ಹಿರಿಯ ನಾಯಕರೇ ಹಠಮಾರಿ ಧೋರಣೆಯಿಂದ ದೂರವಾಗಿದ್ದಾರೆ. ಶಾಸಕರ ವಿರುದ್ಧ ನಿರಂತರವಾಗಿ ಒಳಸಂಚು ರೂಪಿಸುತ್ತಿರುವುದರಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ. 
 ಆಲ್ದೂರು, ಕಳಸ ಬ್ಲಾಕ್ ಕಾಂಗ್ರೆಸ್ ಮತ್ತು ಶಾಸಕರ ಮಧ್ಯೆ ಸಮನ್ವಯ ಕೊರತೆಯಿಲ್ಲ. ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ ನಾಯಕತ್ವದಲ್ಲಿ ಮಾತ್ರ ವಿರೋಧ ವ್ಯಕ್ತವಾಗುತ್ತಿದೆ. ಸುರೇಂದ್ರ ಅವರು ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಶಾಸಕರನ್ನು ಕಡೆಗಣಿಸಿ ಕಾರ್ಯಕ್ರಮ ಆಯೋಜಿಸುತ್ತಾರೆ. ಬ್ಲಾಕ್, ಹೋಬಳಿ ಕಾಂಗ್ರೆಸ್ ಪದಾಧಿಕಾರಿಗಳ ನೇಮಕ ಅಥವಾ ಬದಲಾವಣೆ ಮಾಡಿಲ್ಲ. 2013ರಲ್ಲಿ ಆಯ್ಕೆಯಾದ ಪದಾಧಿಕಾರಿಗಳು ಈವರೆಗೂ ಮುಂದುವರಿದಿದ್ದಾರೆ. ಹೊಸಬರಿಗೆ ಅವಕಾಶ ಮಾಡಿಕೊಡಲು ನೂತನ ಪದಾಧಿಕಾರಿಗಳ ಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷರಿಗೆ ನೀಡಲಾಗಿದೆ. ಆ ಪಟ್ಟಿಯಂತೆ ಹೊಸಬರನ್ನು ನೇಮಿಸಿ ಈಗಿನ ಪದಾಧಿಕಾರಿಗಳನ್ನು ಕೈಬಿಡಬೇಕು. ಹಿಂದೂ ಮಹಾಗಣಪತಿ ಸಮಿತಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಮೋದ್ ಮುತಾಲಿಕ್ ಭಾಗವಹಿಸಿದ್ದ ಸಭೆಯಲ್ಲಿ ಶಾಸಕರು ಭಾಗವಹಿಸಿದ್ದರು. ಅದನ್ನು ಕೆಲವರು ವಿರೋಧಿಸುತ್ತಿದ್ದಾರೆ. ತಾರತಮ್ಯ ಮಾಡದೆ ಎಲ್ಲ 9 ಹೋಬಳಿಗಳಿಗೂ ನಯನಾ ಮೋಟಮ್ಮ ಸಮಾನವಾಗಿ ಅನುದಾನ ಹಂಚಿಕೆ ಮಾಡಿದ್ದಾರೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ. 
 ಮುಖಂಡರಾದ ಬಿ.ಎಸ್.ಜಯರಾಮ್, ಯು.ಎಚ್.ಹೇಮಶೇಖರ್, ಎಂ.ಎಸ್.ಅನಂತ್ ಅವರ ಸರ್ವಾಧಿಕಾರಿ ಧೋರಣೆಯಿಂದ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ 20 ವರ್ಷದಿಂದ ಕಾಂಗ್ರೆಸ್ ಸೋತಿದೆ. ಈ ಮೂವರನ್ನೂ ಪಕ್ಷದ ಕಾರ್ಯಕರ್ತರು ಸೆಟ್ ದೋಸೆ ಎಂದು ಆಡಿಕೊಳ್ಳುತ್ತಾರೆ. ಇಂಥ ಮುಖಂಡರಿಂದ ಪಕ್ಷ ನಾಶವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ನಯನಾ ಮೋಟಮ್ಮ ಅವರಿಗೆ ಟಿಕೆಟ್ ನೀಡದಂತೆ ಚುನಾವಣೆಗೂ ಮೊದಲೆ ಕಾಂಗ್ರೆಸ್ ಹಿರಿಯ ಮುಖಂಡರು ಡಿ.ಕೆ.ಶಿವಕುಮಾರ್ ಮೇಲೆ ಒತ್ತಡ ಹೇರಿದ್ದರು. ಈ ಹಿಂದೆ ಕೆಲವು ಕಾಂಗ್ರೆಸ್ ನಾಯಕರು ಬಿಜೆಪಿ ಮತ್ತು ಜೆಡಿಎಸ್ ಜತೆ ಒಪ್ಪಂದ ಮಾಡಿಕೊಂಡು ಮಾಜಿ ಸಚಿವೆ ಮೋಟಮ್ಮ ಅವರು ಒಕ್ಕಲಿಗ ವಿರೋಧಿ ಎಂದು ಬಿಂಬಿಸಿ ನೈತಿಕ ಬಲ ಕುಂದುವಂತೆ ಮಾಡಿದ್ದರು. ಮೋಟಮ್ಮ ಎಲ್ಲ ಧರ್ಮೀಯೊರೊಂದಿಗೂ ಬೆರೆಯಲು ಬಿಡುತ್ತಿರಲಿಲ್ಲ. ಈಗ ನಯನಾ ಮೋಟಮ್ಮ ಅವರ ನೈತಿಕ ಬಲವನ್ನು ಕುಂದುವಂತೆ ಮಾಡಲು ಸಂಚು ರೂಪಿಸುತ್ತಿದ್ದಾರೆ. ಇದಕ್ಕೆ ನಯನಾ ಮೋಟಮ್ಮ ಅವರು ಅವಕಾಶ ನೀಡದಿದ್ದರಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಎಲ್ಎ-2 ನೇಮಕ ಪಟ್ಟಿ ತಯಾರಿಸಲು ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ ಸ್ಪಂದಿಸಲಿಲ್ಲ. ಕಳಸ ಮತ್ತು ಆಲ್ದೂರು ಬ್ಲಾಕ್ ಅಧ್ಯಕ್ಷರ ನೇತೃತ್ವದಲ್ಲಿ ಪಟ್ಟಿ ತಯಾರಿಸಲಾಗಿದೆ. ಇದರಲ್ಲಿ ಲೋಪವಾಗಿಲ್ಲ ಎಂದು ವಿವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net