ಬಾಳೆಹೊನ್ನೂರು: ರಂಭಾಪುರಿ ಪೀಠದ 120ನೇ ಪೀಠಾಧೀಶರಾದ ಪ್ರಸನ್ನ ರೇಣುಕ ವೀರ ರುದ್ರಮುನಿದೇವ ಶಿವಾಚಾರ್ಯ ಜಗದ್ಗುರುಗಳ 34ನೇ ವರ್ಷದ ಪುಣ್ಯ ಸ್ಮರಣೋತ್ಸವ ಆ.20ರಂದು ರಂಭಾಪುರಿ ಪೀಠದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆ ಬಾರ್ಸಿ ತಾಲೂಕಿನ ವೈರಾಗ ಹಿರೇಮಠದ ವೇ.ಬಾಳಲಿಂಗಯ್ಯ ಸ್ವಾಮಿ ಮತ್ತು ಲಕ್ಷ್ಮೀಬಾಯಿ ಪುತ್ರರಾದ ವೀರ ರುದ್ರಮುನಿದೇವ ಶ್ರೀಗಳು ವೈರಾಗ ಬಾರ್ಸಿ ಸೋಲ್ಲಾಪುರದಲ್ಲಿ ಶಿಕ್ಷಣ ಪೂರೈಸಿ ಉನ್ನತ ವ್ಯಾಸಂಗಕ್ಕಾಗಿ ಶ್ರೀ ಕ್ಷೇತ್ರ ಕಾಶಿಗೆ ತೆರಳಿ ವಿದ್ಯಾ ವಿನಯ ಸಂಪನ್ನರಾಗಿ ಬೆಳೆದು ಹಿರೇಮಠದ ಪಂಚಾಕ್ಷರ ಶಿವಾಚಾರ್ಯರಾಗಿ ಅಧಿಕಾರ ಪಡೆದರು.
ಚತುರ್ಭಾಷಾ ಪಂಡಿತರಾದ ಶ್ರೀಗಳು ಮಹಾರಾಷ್ಟ್ರ ರಾಜ್ಯದಲ್ಲಿ ಶ್ರಾವಣ ತಪೋನುಷ್ಠಾನ ನೆರವೇರಿಸಿ ಭಕ್ತ ಸಂಕುಲಕ್ಕೆ ಪ್ರವಚನ ನೀಡುವ ಮೂಲಕ ಜನ ಜಾಗೃತಿ ಉಂಟು ಮಾಡಿದ್ದರು. ಆಚಾರ ವಿಚಾರ ನಿಷ್ಠರಾದ ವೈರಾಗ ಹಿರೇಮಠದ ಪಂಚಾಕ್ಷರ ಶಿವಾಚಾರ್ಯರನ್ನು ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ತಮ್ಮ ಉತ್ತರಾಧಿಕಾರಿಗಳನ್ನಾಗಿ ನಿಯುಕ್ತಿ ಮಾಡಿ 1972 ಮೇ 15ರಂದು ಸಮಾನ ಪೀಠಗಳ ಸಮ್ಮುಖದಲ್ಲಿ ಜಗದ್ಗುರು ಪಟ್ಟಾಭಿಷೇಕ ನೆರವೇರಿಸಿ ಜಗದ್ಗುರು ಪ್ರಸನ್ನ ರೇಣುಕ ವೀರ ರುದ್ರಮುನಿದೇವ ಶಿವಾಚಾರ್ಯ ಭಗವತ್ಪಾದರು ಎಂಬ ನೂತನ ನಾಮಾಂಕಿತದಿಂದ ಶುಭ ಹಾರೈಸಿದರು.
ಪೀಠಾರೋಹಣ ಮಾಡಿದ ನಂತರ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ರಾಜ್ಯಗಳಲ್ಲಿ ಸಂಚರಿಸಿ ಧರ್ಮ ಜಾಗೃತಿ ಕೈಕೊಂಡರು. ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯರಿಗೆ ಬೋಧಿಸಿದ ಸಿದ್ಧಾಂತ ಶಿಖಾಮಣಿಯ 21 ಪರಿಚ್ಛೇದಗಳನ್ನು ಕಂಠಸ್ಥ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.
ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬಾಳೆಹೊನ್ನೂರಿನಲ್ಲಿ ಪ್ರೌಢಶಾಲೆ ಮತ್ತು ಜಗದ್ಗುರು ರೇಣುಕಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರ ಪ್ರಾರಂಭಿಸಿದರು. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಒಲವು ಹೊಂದಿದ ಜಗದ್ಗುರುಗಳು ಕಾಫಿ ತೋಟ-ಗದ್ದೆಗಳನ್ನು ಪುನರುಜ್ಜೀವನಗೊಳಿಸಿ ಆರ್ಥಿಕ ಭದ್ರತೆಗೆ ಶ್ರಮಿಸಿದರು. ಹಲವಾರು ರಚನಾತ್ಮಕ ಕಾರ್ಯಗಳ ಮೂಲಕ ಶ್ರೀ ಪೀಠದ ಸರ್ವಾಂಗೀಣ ಪ್ರಗತಿಗಾಗಿ ಸದಾ ಶ್ರಮಿಸಿದರು.
19 ವರ್ಷ ಶ್ರೀಪೀಠವನ್ನು ಆರೋಹಣ ಮಾಡಿ ತಮ್ಮ ಉತ್ತರಾಧಿಕಾರಿಗಳನ್ನಾಗಿ ಪ್ರಸ್ತುತ ಜಗದ್ಗುರುಗಳವರನ್ನು ಆಯ್ಕೆ ಮಾಡಿ ಮೃತ್ಯು ಪತ್ರ ಬರೆದಿಟ್ಟು 1991 ಶ್ರಾವಣ ಶುದ್ಧ ಅಷ್ಟಮಿಯಂದು ಲಿಂಗೈಕ್ಯರಾದರು. ರುದ್ರಮುನಿ ಜಗದ್ಗುರುಗಳ ಹೆಸರು ಸದಾ ಉಳಿಯಬೇಕೆಂಬ ಉದ್ದೇಶದಿಂದ ಪ್ರಸ್ತುತ ಜಗದ್ಗುರುಗಳು ಅವರ ಗದ್ದುಗೆಯನ್ನು ಶಿಲಾಮಯವಾಗಿ ನಿರ್ಮಿಸುವ ಜತೆಗೆ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲೆ ಮತ್ತು ಜಗದ್ಗುರು ರುದ್ರಮುನೀಶ್ವರ ಸಮುದಾಯ ಭವನ ನಿರ್ಮಿಸಿ ಕೃತಜ್ಞತೆ ಸಲ್ಲಿಸಿದ್ದಾರೆ. ಶ್ರೀ ಲಿಂಗೈಕ್ಯ ಜಗದ್ಗುರುಗಳ ಪುಣ್ಯ ಸ್ಮರಣೋತ್ಸವ ಸಮಾರಂಭದಲ್ಲಿ ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಪಾಲ್ಗೊಳ್ಳಲಿದ್ದಾರೆ.