ಸಿಎಂ ಸಿದ್ದರಾಮಯ್ಯ ಆಡಳಿತ ಮಾದರಿ

ಕಡೂರಿನ ಅಂಬೇಡ್ಕರ್ ವೃತ್ತದಲ್ಲಿ ಭಂಡಾರಿ ಶ್ರೀನಿವಾಸ್ ಅಭಿಮಾನಿಗಳ ಬಳಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬ್ಯಾನರ್‌ಗೆ ಪುಷ್ಪವೃಷ್ಟಿ ಮಾಡಿದರು. ಮರುಗುದ್ದಿ ಮನು, ಶಂಕರ್, ಮಂಜುನಾಥ್, ಕಾಂತರಾಜ್ ಮತ್ತಿತರರಿದ್ದರು.
ಕಡೂರಿನ ಅಂಬೇಡ್ಕರ್ ವೃತ್ತದಲ್ಲಿ ಭಂಡಾರಿ ಶ್ರೀನಿವಾಸ್ ಅಭಿಮಾನಿಗಳ ಬಳಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬ್ಯಾನರ್‌ಗೆ ಪುಷ್ಪವೃಷ್ಟಿ ಮಾಡಿದರು. ಮರುಗುದ್ದಿ ಮನು, ಶಂಕರ್, ಮಂಜುನಾಥ್, ಕಾಂತರಾಜ್ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪುರಸಭೆ ಮಾಜಿ ಸದಸ್ಯ ಮರುಗುದ್ದಿ ಮನು ಅಭಿಪ್ರಾಯ
  • ದೀರ್ಘಕಾಲದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ

ಕಡೂರು: ನಾಡಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮುಖ್ಯಮಂತ್ರಿಸಿದ್ದರಾಮಯ್ಯ ಅವರ ಆಡಳಿತ ವೈಖರಿ ಜನಸಾಮಾನ್ಯರ ಪಾಲಿಗೆ ನೆಮ್ಮದಿ ನೀಡುವಂತಾಗಿದೆ ಎಂದು ಪುರಸಭೆ ಮಾಜಿ ಸದಸ್ಯ ಮರುಗುದ್ದಿ ಮನು ಅಭಿಪ್ರಾಯಪಟ್ಟರು.

ಸಿದ್ದರಾಮಯ್ಯ ಅವರು ದೀರ್ಘಕಾಲದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಪ್ರಯುಕ್ತ ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಭಂಡಾರಿ ಶ್ರೀನಿವಾಸ್ ಅಭಿಮಾನಿಗಳ ಬಳಗದಿಂದ ಏರ್ಪಡಿಸಿದ್ದ ಸಂಭ್ರಮಾಚರಣೆಯಲ್ಲಿ ಮಾತನಾಡಿ, ದೇವರಾಜ ಅರಸು ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀರ್ಘಕಾಲ ಜನಪರ ಆಡಳಿತ ನಡೆಸಿದ್ದಾರೆ. ಬಡವರ ಪಾಲಿಗೆ ಅಕ್ಷರಶಃ ಅನ್ನದಾತನೆನಿಸಿಕೊಂಡಿದ್ದಾರೆ ಎಂದರು.

ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಪ್ರತಿ ಕುಟುಂಬಕ್ಕೂ ಸರ್ಕಾರದ ಯಾವುದಾದರೊಂದು ಯೋಜನೆಯನ್ನು ತಲುಪುವಂತೆ ಮಾಡಿ ರಾಜ್ಯದ ಜನತೆಯ ಮನಗೆದ್ದಿದ್ದಾರೆ. ಅವರ ಆಡಳಿತ ಇತರರಿಗೆ ಆದರ್ಶ. ಅವರ ಸಾಧನೆ ನಮಗೆಲ್ಲ ಸ್ಫ್ಪೂರ್ತಿಯಾಗಲಿ ಎಂಬ ಆಶಯದಿಂದ ಬಳಗದಿಂದ ಅಭಿನಂದನೆ ಸಲ್ಲಿಸಿದ್ದೇವೆ ಎಂದರು.

ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಎಚ್.ಶಂಕರ್ ಮಾತನಾಡಿ, ಸಿದ್ದರಾಮಯ್ಯ ಎಂದರೆ ಸ್ವಚ್ಛ ರಾಜಕಾರಣಿ ಮತ್ತು ನೇರವಂತಿಕೆ.  ರಾಜ್ಯದ ಜನತೆ ನೆಮ್ಮದಿಯಾಗಿರಬೇಕೆಂಬ ಆಶಯ ಸಿದ್ದರಾಮಯ್ಯ ಅವರದ್ದಾಗಿದೆ. ಈ ನಿಟ್ಟಿನಲ್ಲಿ ಅವರು ಅನುಷ್ಠಾನಗೊಳಿಸಿದ ಗ್ಯಾರಂಟಿ ಯೋಜನೆಗಳಿಂದ ಜನ ನೆಮ್ಮದಿಯಿಂದ ಜೀವನ ನಡೆಸಲು ಪೂರಕವಾಗಿದೆ. ಸಿದ್ದರಾಮಯ್ಯ ಅವರ ಆಡಳಿತ ಜನಪರ ನಿಲುವನ್ನು ಸದಾ ಪ್ರತಿಪಾದಿಸುತ್ತದೆ ಎಂದರು.

ಡಿಎಸ್‌ಎಸ್ ಮುಖಂಡ ಕೃಷ್ಣಪ್ಪ ಮಾತನಾಡಿ, ದೇವರಾಜು ಅರಸರ ನಂತರ ದಲಿತರಿಗೆ ಸ್ಥೈರ್ಯ ತಂದಿತ್ತ ರಾಜಕಾರಣಿ ಸಿದ್ದರಾಮಯ್ಯ. ದೇಶದ ಇತರ ರಾಜ್ಯಗಳಿಗೆ ಮಾದರಿಯಾದ ಆಡಳಿತ ನೀಡುತ್ತಿದ್ದಾರೆ. ಅವರ ಆಡಳಿತದಿಂದ ಕರ್ನಾಟಕ ಮಾದರಿ ರಾಜ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಯರದಕೆರೆ ರಾಜಪ್ಪ ಮಾತನಾಡಿ, ಸಾಂಕೇತಿಕವಾಗಿ ಸಂಭ್ರಮಾಚರಿಸಲಾಗುತ್ತಿದೆ. ಶೀಘ್ರದಲ್ಲೇ  ಶಾಸಕರು ಹಾಗೂ ಸ್ಥಳೀಯ ನಾಯಕರು ಒಳಗೊಂಡಂತೆ ಅಹಿಂದ ಅಭಿಮಾನಿಗಳ ಪಡೆ ಮೂಲಕ ಸಂಭ್ರಮೋತ್ಸವ ಅದ್ದೂರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಅಭಿಮಾನಿಗಳು ಕ್ಷೀರಾಭಿಷೇಕ ಮಾಡಿ ಪುಷ್ಪವೃಷ್ಟಿ ಮಾಡಿದರು. ಜನರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಪಟ್ಟಣದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಅಭಿಮಾನಿಬಳಗದಿಂದ ವಿಶೇಷ ಪೂಜೆ ಸಲ್ಲಿಸಿದರು.

ಮುಖಂಡರಾದ ಡಿಶ್ ಮಂಜುನಾಥ್, ಕಾಂತರಾಜ್,  ಆರೀಫ್, ರಾಜಕುಮಾರ್, ಪಂಗ್ಲಿ ಮಂಜುನಾಥ್, ರಾಮು, ರಮೇಶ್, ನಾಗರಾಜ್, ಧರ್ಮರಾಜ್, ಯರದಕೆರೆ ಓಂಕಾರ್, ಮಂಜುನಾಥ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net