ಕೌಟುಂಬಿಕ ಸಾಮರಸ್ಯ ಗಟ್ಟಿಗೊಳಿಸುವ ಚೂಡಿ ಪೂಜೆ

ಶ್ರಾವಣ ಮಾಸದಿ ಆಕರ್ಷಕವಾಗಿ ಕಟ್ಟುವ ಚೂಡಿ.
ಶ್ರಾವಣ ಮಾಸದಿ ಆಕರ್ಷಕವಾಗಿ ಕಟ್ಟುವ ಚೂಡಿ.
Published on
ಶೃಂಗೇರಿ: ಮಲೆನಾಡಿನಲ್ಲಿ ಕೃಷಿ ಚಟುವಟಿಕೆಗಳ ನಡುವೆ ಮನೆಯನ್ನು ಸ್ವಚ್ಛಗೊಳಿಸಿ ಸುಣ್ಣ ಬಣ್ಣಗಳಿಂದ ಅಲಂಕರಿಸಿ, ಮನೆ ಅಂಗಳಕ್ಕೆ ಸಗಣಿ ಸಾರಿಸಿ ರಂಗೋಲಿ, ಹೂಗಳನ್ನು ಇಟ್ಟು ಮನೆಗೆ ಗೋಮೂತ್ರ ಸಿಂಪಡಿಸಿ ಹಿರಿಯರು ಶ್ರಾವಣ ಶನಿವಾರವನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದರು.
ಶ್ರಾವಣ ಶನಿವಾರ ಭಕ್ತಿಯಿಂದ ದೇವರನ್ನು ಸ್ಮರಿಸಬೇಕು.ಈ ಮಾಸದಲ್ಲಿ ದೇವತೆಗಳು ಭೂಲೋಕಕ್ಕೆ ಬರುತ್ತಾರೆ ಎಂಬ ನಂಬಿಕೆ ಇದೆ. ಶ್ರಾವಣ ಮಾಸದಲ್ಲಿ ಸೂರ್ಯ ತನ್ನ ಸ್ವಕ್ಷೇತ್ರದಿಂದ ಸಿಂಹ ರಾಶಿಗೆ ಆಗಮಿಸುತ್ತಾನೆ. ಈ ಸಂದರ್ಭದಲ್ಲಿ ಸೂರ್ಯ ದೇವನ ಬಿಂಬವನ್ನು ಬರೆದು ಗರಿಕೆ, ಬಣ್ಣಬಣ್ಣದ ಹೂಗಳನ್ನು ಅರ್ಪಿಸುವ ಪದ್ಧತಿ ಇಂದಿಗೂ ಇದೆ. ಗೌಡಸರಸ್ವತ ಬ್ರಾಹ್ಮಣ ಸಮುದಾಯದ ಮುತ್ತೈದೆಯರು ಶ್ರಾವಣ ಮಾಸದ ಶುಕ್ರವಾರ ಮತ್ತು ಭಾನುವಾರ ತುಳಸಿ ಸನ್ನಿಧಿಯಲ್ಲಿ ಚೂಡಿ ಪೂಜೆ ನಡೆಸುತ್ತಾರೆ.
ಚೂಡಿಗೆ ಸೂಡಿ ಎಂದು ಕರೆಯುತ್ತಾರೆ. ಸೂಡಿ ಎಂದರೆ ಗಂಟು ಅಥವಾ ಗುಂಪು. ಪರಿಸರದಲ್ಲಿ ದೊರಕುವ ಗರಿಕೆ ಹುಲ್ಲು, ರಥಪುಪ್ಪ, ಕರವೀರ, ರತ್ನಗಂ, ಮಿಠಾಯಿ ಹೂವು ಹಾಗೂ ವೈವಿಧ್ಯಮಯ ಸಸ್ಯಗಳಾದ ಕಾಗೆಕಣ್ಣು, ಸಾಸಿವೆ ಹೂವು ಇತ್ಯಾದಿಗಳನ್ನು ಒಟ್ಟುಗೂಡಿಸಿ ಬಾಳೆಹಗ್ಗದಿಂದ ಒಟ್ಟಿಗೆ ಕಟ್ಟಿದ್ದರೆ ಅದೇ ಚೂಡಿ.
ಪ್ರಾತ:ಕಾಲ ಚೂಡಿಪೂಜೆಗೆ ಉತ್ತಮ ಸಮಯ. ಒಂದು ವೇಳೆ ಈ ಸಮಯದಲ್ಲಿ ಪೂಜೆ ಮಾಡಲು ಆಗದವರು ಮಧ್ಯಾಹ್ನ 12ಗಂಟೆಗೆ ಪೂಜೆ ಮುಗಿಸಬೇಕು.ಬೆಳಗ್ಗೆ ಮಂಗಳ ಸ್ನಾನದ ಬಳಿಕ ಮುತ್ತೈದೆಯರು ಸಾಂಪ್ರಾದಾಯಿಕ ಶೈಲಿಯ 18 ಮೊಳದ ಸೀರೆ ಉಟ್ಟು ಬಾವಿಯ ದಂಡೆಗೆ ಹಳದಿ ಕುಂಕುಮ ಹಚ್ಚಿ ಹೂವು ಇಟ್ಟು ನೀರಿಗೆ ಅರಶಿನ-ಕುಂಕುಮ ಸಮರ್ಪಿಸಿ,ಗಂಗೆಯನ್ನು ಸ್ಮರಿಸಿ ನೀರು ತೆಗೆದು ಅದನ್ನು ತುಳಸಿ ಕಟ್ಟೆಯ ಮುಂದಿಟ್ಟು,ರಂಗೋಲಿ ಹಾಕಿ ಹೊಸ್ತಿಲಿಗೆ ಶೇಡಿ ಬರೆದು ಚೂಡಿ ಪೂಜೆ ಪ್ರಾರಂಭಿಸುತ್ತಾರೆ.
ದೀಪ ಹಚ್ಚಿ ತುಳಸಿಗೆ ನೀರು ಎರೆದು ಅರಶಿನ-ಕುಂಕುಮ, ಗಂಧ ಹಚ್ಚಿ ವೀಳ್ಯದ ಜತೆ ಚೂಡಿ ಅರ್ಪಿಸಲಾಗುತ್ತದೆ. ಹಣ್ಣುಕಾಯಿ, ಪಂಚಕಜ್ಜಾಯ ನೈವೇದ್ಯ ಮಾಡಿ ಆರತಿ ಬೆಳಗಲಾಗುತ್ತದೆ. ನಂತರ ತುಳಸಿಗೆ ಐದು ಪ್ರದಕ್ಷಿಣೆ ಹಾಕಿ ಪ್ರತಿ ಸುತ್ತಿಗೂ ತುಳಸಿ ಹಾಗೂ ಸೂರ್ಯದೇವನಿಗೆ ಅಕ್ಷತೆ ಹಾಕುತ್ತಾರೆ. ನಂತರ ದೇವರ ಕೋಣೆಯಲ್ಲಿ ದೀಪ ಬೆಳಗಿ ಕುಟುಂಬದ ಗೃಹಿಣಿಯರಿಗೆ ಮುತ್ತೈದೆ ಭಾಗ್ಯ ಹಾಗೂ ಕುಟುಂಬದ ಸಂಬಂಧಗಳು ಉತ್ತಮ ರೀತಿಯಲ್ಲಿ ಸಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಮನೆಯ ಪ್ರಧಾನ ಹೊಸ್ತಿಲಿಗೆ ಪೂಜೆ ಮಾಡಿ ಚೂಡಿ ಅರ್ಪಿಸಲಾಗುತ್ತದೆ. ದೇವರ ಕೋಣೆಯಲ್ಲಿ ಮನೆ, ಗ್ರಾಮ ದೇವರ ಸನ್ನಿಧಿಗೆ ಚೂಡಿ ಸಮರ್ಪಿಸಲಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net