ಮಕ್ಕಳು ಮನತೃಪ್ತಿಯಿಂದ ಆಹಾರ ಸ್ವೀಕರಿಸುವಂತಿರಬೇಕು

ಚಿಕ್ಕಮಗಳೂರಿನ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಪೌಷ್ಟಿಕಾಂಶ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮವನ್ನು ವೈದ್ಯ ಡಾ.ವೈ.ಎಲ್.ಶಿವಮೂರ್ತಿ ಉದ್ಘಾಟಿಸಿದರು.
ಚಿಕ್ಕಮಗಳೂರಿನ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಪೌಷ್ಟಿಕಾಂಶ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮವನ್ನು ವೈದ್ಯ ಡಾ.ವೈ.ಎಲ್.ಶಿವಮೂರ್ತಿ ಉದ್ಘಾಟಿಸಿದರು.
Published on

ಮಕ್ಕಳು ಆಹಾರವನ್ನು ಮನತೃಪ್ತಿಯಿಂದ ಸ್ವೀಕರಿಸುವಂತಿರಬೇಕು. ಇದು ಅವರ ಸದೃಢ ಹಾಗೂ ಆರೋಗ್ಯಪೂರ್ಣ ಶರೀರಕ್ಕೆ ಕಾರಣವಾಗುತ್ತದೆ ಎಂದು ನಗರದ ಮಲ್ಲಿಕಾರ್ಜುನ ಆಸ್ಪತ್ರೆಯ ಡಾ.ವೈ.ಎಲ್.ಶಿವಮೂರ್ತಿ ಸಲಹೆ ನೀಡಿದರು.

ನಗರದ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಪೌಷ್ಟಿಕಾಂಶ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಮಕ್ಕಳಿಗೆ ಮನಸ್ಸಿಟ್ಟು ಆಹಾರ ನೀಡುವುದು ಒಂದು ರೀತಿ ಗೌಣವಾಗಿದ್ದು, ಮೊಬೈಲ್ ನೋಡುತ್ತಿರುವಂತೆ ಅಥವಾ ಕೆಲವೊಮ್ಮೆ ಮಕ್ಕಳು ಊಟದ ಒಲವು ತೋರಿಸಲೆಂದು ಪಾಲಕರೇ ಅವರ ಕೈಗೆ ಮೊಬೈಲ್ ಕೊಟ್ಟು ಊಟ ಮಾಡಿಸುವುದು ಹೆಚ್ಚಾಗುತ್ತಿದೆ. ಇದು ಒಳ್ಳೆಯ ಅಭ್ಯಾಸವಲ್ಲ ಎಂದು ಅವರು ಹೇಳಿದರು.
ದಿನನಿತ್ಯ ನಾವು ಮಕ್ಕಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದರೂ ಆಹಾರ ಸೇವನೆಯ ವಿಚಾರದಲ್ಲಿ ಪಾಲಕರು ಇನ್ನಷ್ಟು ಗಮನವನ್ನು ಹರಿಸಬೇಕಾಗಿದೆ. ಮಕ್ಕಳಿಗೆ ಹೊಟ್ಟೆ ತುಂಬಿಸಲಷ್ಟೇ ಆಹಾರ ಕೊಡುವುದಲ್ಲ. ಅವರ ಮಿದುಳು, ದೇಹ ಹಾಗೂ ಮೂಳೆಗಳ ಬೆಳವಣಿಗೆಗೆ ಹಾಗೂ ಜ್ಞಾಪಕ ಶಕ್ತಿ, ರೋಗ ನಿರೋಧಕ ಶಕ್ತಿ ವೃದ್ಧಿಗೆ ಪೂರಕವಾದ ಆಹಾರವನ್ನು ನೀಡುವುದು ಅವಶ್ಯಕ. ಉತ್ತಮವಾದ ಹಾಗೂ ಸೂಕ್ತ ರೀತಿಯ ಆಹಾರ ಸ್ವೀಕರಿಸಿ, ಆರೋಗ್ಯ ಪೂರ್ಣವಾಗಿ ಬದುಕಿ. ಹೆಚ್ಚು ಪೌಷ್ಟಿಕ ಆಹಾರ ಸೇವಿಸಿ ಎಂಬುದು ಇಂದಿನ ಅನಿವಾರ್ಯ. ಈ ಮೂರು ಅಂಶಗಳು ಅವರ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಅತ್ಯಗತ್ಯ ಎಂದರು.
ಸ್ವತಃ ವೈದ್ಯರೂ ಆದ ಸಂಸ್ಥೆಯ ಕಾರ್ಯಕಾರಿ ಮಂಡಳಿ ಸದಸ್ಯ ಡಾ.ಡಿ.ಪಿ.ಮೋಹನ್ ಮಾತನಾಡಿ, ಗೋಬಿ ಮಂಚೂರಿ, ಪಾನಿಪೂರಿ, ಚಿಪ್ಸ್, ಕೋಕಕೋಲ ಹೀಗೆ ಎಲ್ಲ ಬಣ್ಣದ ಆಹಾರಗಳು ನಮಗೆ ಇಷ್ಟವಾಗುತ್ತವೆ. ಇವುಗಳಿಗಾಗಿ ತಂದೆ-ತಾಯಿ, ಮತ್ತಿತರರನ್ನು ಕಾಡಿ, ಬೇಡಿ ಮಕ್ಕಳು ತಿನ್ನುವುದು ರೂಢಿ. ಈ ಜಂಕ್‌ಪುಡ್‌ಗಳು ಅದರಲ್ಲೂ ಬಣ್ಣಗಳಿಂದ ತುಂಬಿರುವ ಪದಾರ್ಥಗಳು. ಅವು ಕೆಮಿಕಲ್‌ಗಳಿಂದ ಕೂಡಿದ್ದು, ಕ್ಯಾನ್ಸರ್ ಕಾರಕವೇ ಆಗಿವೆ. ಹಾಗೊಂದು ವೇಳೆ ತಿನ್ನಲೇಬೇಕೆಂದಿದ್ದರೆ ವಾರ-ಹದಿನೈದು ದಿನಕ್ಕೊಮ್ಮೆ ಕಲರ್‌ಗಳು ಇಲ್ಲದೇ ಇರುವ ಪದಾರ್ಥಗಳನ್ನು ತಿನ್ನುವುದು ಸೂಕ್ತ. ತಂದೆ-ತಾಯಿಯನ್ನು ಅವಲಂಬಿಸಿ ಮನೆಯಲ್ಲಿ ತಯಾರಿಸುವ ತಿಂಡಿಗಳನ್ನೇ ಸೇವಿಸುವುದು ಅದಕ್ಕಿಂತಲೂ ಅತ್ಯುತ್ತಮವಾದ ಮಾರ್ಗ ಎಂದು ಹೇಳಿದರು.
ಮಕ್ಕಳು ಎಲ್ಲ ಬಗೆಯ ಹಣ್ಣುಗಳನ್ನು ಹಾಗೂ ತರಕಾರಿಗಳನ್ನು ಸೇವಿಸಬೇಕು. ಹಣ್ಣಿನ ಜೂಸ್‌ಗಳನ್ನು ಸೇವಿಸುವುದಕ್ಕಿಂತಲೂ ಹಣ್ಣುಗಳನ್ನು ತಿನ್ನುವುದೇ ಉತ್ತಮ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯೆ ಎಸ್.ಆರ್.ಹೇಮಾ ಮಾತನಾಡಿ, ಪೌಷ್ಟಿಕಾಂಶಯುಕ್ತ ಆಹಾರ ಬಳಕೆ ಆರೋಗ್ಯ ಮತ್ತು ಸಂತಸದ ಬದುಕಿಗೆ ಬುನಾದಿಯಾಗಿದೆ. ಎಳೆಯ ಮಕ್ಕಳು ಬೆಳೆಯಲು, ಕ್ರಿಯಾಶೀಲರಾಗಿರಲು ಮೂಳೆಗಳು ಗಟ್ಟಿಯಾಗಲು, ಮಾಂಸ ಖಂಡಗಳು ಬಲವರ್ಧನೆಗೊಳ್ಳಲು, ಕಲಿಕೆಯಲ್ಲಿ ಏಕಾಗ್ರತೆ ಅಭಿವೃದ್ಧಿಪಡಿಸಿಕೊಳ್ಳಲು ಪೌಷ್ಟಿಕ ಆಹಾರ ಸಹಾಯಕ ಎಂದರು.
ಪೋಷಕರು ಉತ್ತಮವಾದ ಆಹಾರ-ವಿಹಾರಗಳನ್ನು ರೂಢಿಸಿಕೊಂಡಾಗ ಸಹಜವಾಗಿಯೇ ಮಕ್ಕಳು ಅವರನ್ನು ಅನುಕರಿಸುತ್ತಾರೆ. ತಾಜಾ ಹಣ್ಣುಗಳು, ತರಕಾರಿಗಳು, ಹಾಲು, ಬೇಳೆಕಾಳುಗಳು, ಮನೆಯಲ್ಲಿ ಮಾಡಿದ ಅಡುಗೆಯನ್ನೇ ಪಾಲಕರು ಅವಲಂಬಿಸಿದಲ್ಲಿ ಮಕ್ಕಳಿಗೆ ಅದೇ ಪ್ರೇರಣೆಯಾಗುತ್ತದೆ ಎಂದು ಹೇಳಿದರು.
ಮಕ್ಕಳು ಜಂಕ್ ಫುಡ್‌ನಿಂದ ದೂರವಿದ್ದು, ಸಮತೋಲಿತ ಆಹಾರ, ಕ್ರಮಬದ್ಧ ದೈಹಿಕ ಚಟುವಟಿಕೆ, ಉತ್ತಮ ನಿದ್ರೆ, ಸಾಕಷ್ಟು ನೀರಿನ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ದೊರೆಯುತ್ತದೆ. ಸಾಂದರ್ಭಿಕವಾಗಿ ಔತಣಕೂಟದಲ್ಲಿ ಸತ್ಕರಿಸುವಾಗ ಸಹ ಯಾವುದೇ ಕಾರಣಕ್ಕೂ ಆ ಊಟ ಪೌಷ್ಟಿಕಾಂಶದ ಹೊರತಾಗಿರಬಾರದು. ಇದೆಲ್ಲ ಆರೋಗ್ಯಕರ ಬಾಲ್ಯಕ್ಕೆ ಮೂಲ ಕಾರಣವಾಗುತ್ತದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಎಂ.ಪಿ.ಉಡುಪ, ಸಹಕಾರ್ಯದರ್ಶಿ ಉಪಸ್ಥಿತರಿದ್ದರು. ಸಹಶಿಕ್ಷಕಿಯರಾದ ರಾಜೇಶ್ವರಿ, ಡಿ.ಚೇತನಾ, ಬಿ.ಜಿ.ಸವಿತಾ ಹಾಗೂ ಹೀರಾ ನಾಝ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net