ಕಳಸ: ಹಿರಿಯರು ಅಥವಾ ಉಪಕಾರ ಮಾಡಿದವರ ನೆನಪಿಗೆ, ಇಲ್ಲವೇ ನಾಡು-ನುಡಿ ಸೇವೆಗಾಗಿ ಕಸಾಪ ಸದಸ್ಯರು ಹಾಗೂ ಸಾರ್ವಜನಿಕರು ನೀಡುವ ಶಾಶ್ವತ ಠೇವಣಿಯಿಂದ ಪ್ರತಿ ವರ್ಷ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಕಳಸ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸತೀಶ್‌ಚಂದ್ರ ತಿಳಿಸಿದರು.
ಜಿಲ್ಲಾ ಕಸಾಪ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಶ್ರಯದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಮತ್ತು ಕಳಸ ಹೋಬಳಿ 2ನೇ ಸಾಹಿತ್ಯ ಸಮ್ಮೇಳನ ದತ್ತಿ ಹಾಗೂ ಕಳಸ ತಾಲೂಕು ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ದತ್ತಿ ಉಪನ್ಯಾಸ ಯೋಜನೆ ಮೊದಲು ಜಾರಿಗೆ ಬಂದಿದ್ದು 1935ರಲ್ಲಿ ಕಸಾಪ ಅಧ್ಯಕ್ಷ ಬಿ.ಎಂ.ಶ್ರೀಕಂಠಯ್ಯ ಅವರಿಂದ. 1935 ಜು.23ರಂದು ಗಮಕ ಕಲಾಭಿವೃದ್ಧಿಗಾಗಿ ಬಿಎಂಶ್ರೀ ಅವರು 1000 ರೂಪಾಯಿ ಪರಿಷತ್ತಿನ ಮೂಲನಿಧಿಗೆ ನೀಡುವ ಮೂಲಕ ಮೊದಲ ದತ್ತಿ ದಾನಿಯಾದರು ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಕನ್ನಡವು ಅತ್ಯಂತ ಸುಂದರ ಲಿಪಿ ಹೊಂದಿದೆ. ನಾವು ಆಡುವ ಮಾತನ್ನೇ ಬರಹದಲ್ಲಿ ಬಳಸುವ ಹೆಗ್ಗಳಿಕೆ ಕನ್ನಡಕ್ಕಿದೆ. ನಿರಂತರ ಬಳಕೆಯಿಂದ ಮಾತ್ರ ಭಾಷೆ ಉಳಿಸಲು ಸಾಧ್ಯ. ಹೊಸ ಲೇಖಕರು ಮತ್ತು ಕವಯಿತ್ರಿಯರನ್ನು ಪ್ರೋತ್ಸಾಹಿಸಲು ಜಿಲ್ಲಾ ಸಾಹಿತ್ಯ ಪರಿಷತ್‌ನಿಂದ ಕಾವ್ಯ ರಚನೆ ಹಾಗೂ ಕಥಾ ಕಮ್ಮಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಧರ್ಮದ ಉತ್ಥಾನದಲ್ಲಿ ಸಾಹಿತ್ಯದ ಪಾತ್ರ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಪಾಂಡುರಂಗ, ವೇದಗಳ ಕಾಲದಿಂದ ಶ್ರುತಿ ಮುಖಾಂತರವಾಗಿ ಬೆಳೆದುಬಂದ ಸಾಹಿತ್ಯವು ರಾಮಾಯಣ, ಮಹಾಭಾರತ, ಉಪನಿಷತ್ತುಗಳು, ಜೈನ ಸಾಹಿತ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ, ಉಗಾಭೋಗ ಹಾಗೂ ಶರೀರ ಗೀತೆಗಳ ಮೂಲಕ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಮಾರ್ಪಾಡು ಹೊಂದುತ್ತ ಬಂದಿದೆ. ಈ ದೃಢವಾದ ಹಿನ್ನೆಲೆಯೇ ಕನ್ನಡ ಸಾಹಿತ್ಯ ಗಟ್ಟಿಯಾಗಿ ನಿಲ್ಲಲು ಕಾರಣ ಎಂದು ಹೇಳಿದರು.
ಕೆಪಿಎಸ್ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಮಹಮ್ಮದ್ ರಫೀಕ್, ಕಸಾಪ ಜಿಲ್ಲಾ ಸಂಚಾಲಕಿ ಮುಮ್ತಾಜ್ ಬೇಗಂ, ಎಂ.ಎಚ್. ಪೂರ್ಣೇಶ್, ಚಂದ್ರಕಲಾ ಕೊಪ್ಪ, ಅಜಿತ್‌ಪ್ರಸಾದ್, ಪ್ರೇಮ್‌ಕುಮಾರ್, ಕಿರಣ್ ಶೆಟ್ಟಿ, ಸುಮನಾ, ಸುಜಯಾ ಸದಾನಂದ, ನಗೀನಾ, ಸುಚಿತ್ರಾ ಇತರರಿದ್ದರು.
ಪೊಟೋ 2 ಕಳಸ 1
ಕಳಸದಲ್ಲಿ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಉದ್ಘಾಟಿಸಿದರು. ಮುಮ್ತಾಜ್ ಬೇಗಂ, ಎಂ.ಎಚ್.ಪೂರ್ಣೇಶ್, ಚಂದ್ರಕಲಾ, ಪ್ರೇಮ್‌ಕುಮಾರ್, ಕಿರಣ್ ಶೆಟ್ಟಿ, ಸುಮನಾ ಇತರರಿದ್ದರು.